ಮೇಲ್ಮನೆ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬುಧವಾರ ಪ್ರಕಟವಾದ ಶಿಕ್ಷಕರ ಹಾಗು ಪದವಿಧರರ ಕ್ಷೇತ್ರದ ಫಲಿತಾಂಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗು ಕಾಂಗ್ರೆಸ್ ತಲಾ ಎರಡು ಸ್ಥಾನಗಳಲ್ಲಿ ಗೆದ್ದು ಬೀಗಿದ್ದು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಂತರಿಕ ಬಂಡಾಯದ ಬಿಸಿಗೆ ಮತ್ತೊಮ್ಮೆ ನೆಲ ಕಚ್ಚಿದೆ.
ಈ ಕುರಿತು ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಮತಗಳು ಸ್ಥಿರವಾಗಿವೆ. ಪಕ್ಷ ಈ ಹಿಂದೆ ಗೆದಿದ್ದ ಎರಡು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೆಡಿಎಸ್ ಪಾಲಿನ ಮತಗಳು ಸಹ ನಮ್ಮಗೆ ಬಂದಿರುವುದು ಗೆಲುವನ್ನು ಸುಲಭವಾಗಿಸಿದೆ ಎಂದರು.

ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಸಿದ ಅವರು, ಕಾಂಗ್ರೆಸ್ನವರಿಗೆ ಸಂವಿಧಾನ ಹಾಗೂ ಕಾನೂನಿನ ಮೇಲೆ ಯಾವುದೇ ತರಹದ ನಂಬಿಕೆ ಇಲ್ಲ. ಕಾನೂನಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದರು.
ಹಿಂದೆ ನರೇಂದ್ರ ಮೋದಿ ಹಾಗು ಅಮಿತ್ ಶಾ ವಿರುದ್ದವೂ ಸಹ ಇಡ ತನಿಖೆಯನ್ನ ಮಾಡಲಾಗಿತ್ತು ಆಗ ನಾವು ಬಿಜೆಪಿಯವರು ಈ ತರಹ ಬೀದಿಗಿಳಿದು ಹೋರಾಟ ಮಾಡಿರಲಿಲ್ಲ. ಕಾಂಗ್ರೆಸ್ ಯಾವ ಕಾರಣಕ್ಕೆ ಹೋರಾಟ ಮಾಡುತ್ತಿದೆ ಎಂಬುದು ನನ್ನಗೆ ಅರ್ಥವಾಗಿಲ್ಲ ತುರ್ತು ಪರಿಸ್ಥಿತಿಯನ್ನ ಹೇರುವ ಮೂಲಕ ಸಂವಿಧಾನದ ಕಗ್ಗೊಲೆಯನ್ನ ಮಾಡಿದ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಲು ನಾಲಾಯಕ್ ದೇಶದ ಜನರು ಕಾಂಗ್ರೆಸ್ ಪಕ್ಷವನ್ನ ನಿರಂತರವಾಗಿ ತಿರಸ್ಕರಿಸುತ್ತಿದ್ದಾರೆ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಹರಿಹಾಯ್ದರು.