ಬ್ಲರ್ಬ್: ಕೇಸರಿ ಶಾಲು ಧರಿಸಿರುವ ಪುಂಡ ಯುವಕರ ಗುಂಪೊಂದು ಹಾಡಹಗಲೇ ಆದಿವಾಸಿ ಹುಡುಗಿಯರನ್ನು ನಡುರಸ್ತೆಯಲ್ಲಿ ಎಳೆದಾಡಿ, ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ಹುಟ್ಟು ಹಾಕಿತ್ತು.
ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ಪುಂಡ ಯುವಕರ ಗುಂಪೊಂದು ಆದಿವಾಸಿ ಹುಡುಗಿಯರ ಮೇಲೆ ಹಾಡಹಗಲೇ ನಡೆಸಿದ ಲೈಂಗಿಕ ದಾಳಿಗೆ ಸಂಬಂಧಿಸಿದಂತೆ ಪೊಲೀಸರು 15 ಮಂದಿ ಯುವಕರನ್ನು ಬಂಧಿಸಿದ್ದಾರೆ.
ಬುಡಕಟ್ಟು ಜಾತ್ರೋತ್ಸವದ ವೇಳೆ ಇಬ್ಬರು ಆದಿವಾಸಿ ಹುಡುಗಿಯರ ಮೇಲೆ ಯುವಕರ ಗುಂಪು ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಒಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುವ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಅಲಿರಾಜ್‌ಪುರ ಪೊಲೀಸರು ಒಟ್ಟು ಹದಿನೈದು ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಯುವಕರ ಗುಂಪು ಇಬ್ಬರು ಹುಡುಗಿಯರಿಗೆ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡಿ, ಎಳೆದಾಡಿರುವ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 15 ಮಂದಿ ಬಂಧನವಾಗಿದ್ದರೂ ಸಹ, ಸಂತ್ರಸ್ತ ಹುಡುಗಿಯರ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಬಂಧಿತರೆಲ್ಲರೂ 19 ರಿಂದ 25 ವರ್ಷದೊಳಗಿನ ಯುವಕರಾಗಿದ್ದು, ಎಲ್ಲಾ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಘಟನೆ ವಾಲ್ಪುರ ಗ್ರಾಮದಲ್ಲಿ ನಡೆದಿದ್ದು, ʼಭಗೋರಿಯಾʼ ಎಂಬ ಬುಡಕಟ್ಟು ಜಾತ್ರೋತ್ಸವ ವೇಳೆ ಈ ಹೇಯ ದಾಳಿ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಕೇಸರಿಧಾರಿ ಯುವಕರ ಗುಂಪು ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಕಾಣಬಹುದು. ವಾಹನದ ಮರೆಯಲ್ಲಿರುವ ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ಒಂದೆಡೆಯಾದರೆ, ಮತ್ತೊಂದೆಡೆ ಇನ್ನೋರ್ವ ಬಾಲಕಿಯನ್ನು ನಡುರಸ್ತೆಯಲ್ಲೇ ಎಳೆದಾಡಿ, ಅಪ್ಪಿ ಕಿರುಕುಳ ನೀಡುವುದನ್ನು ಕಂಡು ಬಂದಿದೆ.
ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯಗಳು ಭಗೋರಿಯಾ (ಬುಡಕಟ್ಟು ಉತ್ಸವ) ವನ್ನು ಆಯೋಜಿಸುತ್ತದೆ. ಇದು ಆದಿವಾಸಿಗಳ ಪಾಲಿನ ದೊಡ್ಡ ಹಬ್ಬವಾಗಿದ್ದು, ಪ್ರತಿ ವರ್ಷ ಗಂಗಾ ಮಹಾದೇವನ ದೇವಸ್ಥಾನದಲ್ಲಿ ಜಾತ್ರೆಯನ್ನು ಆಯೋಜಿಸುವುದರೊಂದಿಗೆ ಹಬ್ಬ ಪ್ರಾರಂಭವಾಗುತ್ತದೆ.