ಗದಗ:ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಅಚ್ಚರಿಯಾಯಕ ಘಟನೆ ಬೆಳಕಿಗೆ ಬಂದಿದ್ದು, ಮನೆ ನಿರ್ಮಾಣಕ್ಕಾಗಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಂದಾಜು ಒಂದು ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣಗಳು ತುಂಬಿದ್ದ ತಂಬಿಗೆ ಪತ್ತೆಯಾಗಿದೆ. ಈ ತಂಬಿಗೆ ಲಕ್ಕುಂಡಿ ಗ್ರಾಮದ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ದೊರೆತಿದೆ.

ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಅಡಿಪಾಯ ತೋಡುವಾಗ ಮಣ್ಣಿನೊಳಗೆ ತಂಬಿಗೆಯೊಂದು ಕಾಣಿಸಿಕೊಂಡಿದ್ದು, ಅದನ್ನು ತೆರೆಯುತ್ತಿದ್ದಂತೆಯೇ ಅದರಲ್ಲಿ ಚಿನ್ನದ ನಾಣ್ಯಗಳು ಸೇರಿದಂತೆ ಪುರಾತನ ವಿನ್ಯಾಸದ ಆಭರಣಗಳು ಇರುವುದಾಗಿ ತಿಳಿದುಬಂದಿದೆ. ಈ ಅಪಾರ ಮೌಲ್ಯದ ಚಿನ್ನಾಭರಣಗಳನ್ನು ಕಂಡರೂ ಕುಟುಂಬದವರು ಯಾವುದೇ ಆಸೆ ಪಡದೇ ಪ್ರಾಮಾಣಿಕವಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಗಂಗವ್ವ ಅವರ ಪುತ್ರ ಪ್ರಜ್ವಲ್ ಬಸವರಾಜ ರಿತ್ತಿ ಅವರು ತಕ್ಷಣವೇ ಈ ವಿಷಯವನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದು, ದೊರೆತ ಚಿನ್ನಾಭರಣಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಈ ಕುಟುಂಬದ ನಿಷ್ಠಾವಂತ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮಾಹಿತಿ ಪಡೆದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಪತ್ತೆಯಾದ ಚಿನ್ನಾಭರಣಗಳನ್ನು ಅಧಿಕೃತವಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಚಿನ್ನಾಭರಣಗಳು ಎಷ್ಟು ವರ್ಷಗಳ ಹಿಂದಿನವು, ಅವುಗಳ ಮೂಲ ಏನು ಎಂಬುದರ ಕುರಿತು ಮುಂದಿನ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಯಿ–ಮಗನ ಈ ಪ್ರಾಮಾಣಿಕ ಕಾರ್ಯವನ್ನು ಗುರುತಿಸಿ ಜಿಲ್ಲಾ ಆಡಳಿತ ಗೌರವಿಸಿದೆ. ಈ ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂದು ಅಧಿಕಾರಿಗಳು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.











