ನಾನು ಕಳೆದ ಮೂರು ಚುನಾವಣೆಗಳಿಗಿಂತ ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಆತ್ಮವಿಶ್ವಾಸವಿದೆ. ಜನ ನನ್ನ ಪರವಾಗಿ ನಿಲ್ಲುವ ನಂಬಿಕೆಯಿದೆ” ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿಮ್ಮ ಪರವಾಗಿ ವಾತಾವರಣ ಇದೆಯೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ; ಶುಕ್ರವಾರ ಬೆಳಗಿನ ಜಾವದ ತನಕ ಕ್ಷೇತ್ರದ ಕಾರ್ಯಕರ್ತರು, ಮತದಾರರನ್ನು ಭೇಟಿಯಾಗಿ ಬಂದಿದ್ದೇನೆ. ಎಲ್ಲರೂ ಅತ್ಯಂತ ಹುಮ್ಮಸ್ಸಿನಿಂದ ಭಾಗವಹಿಸುತ್ತಿದ್ದಾರೆ” ಎಂದರು.
ಮತದಾನ ಮಾಡಲು ಯುವಕರ ಸಂಖ್ಯೆ ಕಡಿಮೆ ಇದೆ ಎಂದು ಕೇಳಿದಾಗ “ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬದಲ್ಲಿ ಹಿರಿಯರು, ಕಿರಿಯರು ಒಟ್ಟಾಗಿ ಭಾಗವಹಿಸಬೇಕು. ಮತದಾನ ಪ್ರಜಾಪ್ರಭುತ್ವದಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ. ಈ ಹಕ್ಕನ್ನು ನಾವು ಚಲಾವಣೆ ಮಾಡಬೇಕಿರುವುದು ನಮ್ಮ ಕರ್ತವ್ಯ”
ಸಂಸತ್ತು ಪ್ರಜಾಪ್ರಭುತ್ವದ ದೇಗುಲ. ಇದರ ಮೂಲಕ ದೇಶ, ರಾಜ್ಯವನ್ನು ಅಭಿವೃದ್ಧಿ ಮಾಡಲು, ಅವಶ್ಯಕತೆಗಳನ್ನು ಪೂರೈಸಲು, ಒಳ್ಳೆಯದನ್ನು ಮಾಡಲು, ಕಾನೂನು, ನಿಯಮಗಳನ್ನು ಮಾಡಲಾಗುತ್ತದೆ. ಆದ ಕಾರಣ ಲೋಕಸಭಾ ಚುನಾವಣೆ ಪ್ರಮುಖವಾದುದು. ಆದ್ದರಿಂದ ಎಲ್ಲ ನಾಗರಿಕರು ಮತದಾನದಲ್ಲಿ ಭಾಗವಹಿಸಬೇಕು. ನಾನು ನನ್ನ ಸ್ವಂತ ಊರಾದ ದೊಡ್ಡ ಆಲಹಳ್ಳಿಯಲ್ಲಿ ಕುಟುಂಬ ಸದಸ್ಯರ ಸಮೇತ ಮಧ್ಯಾಹ್ನದ ವೇಳೆಗೆ ತೆರಳಿ ಮತದಾನ ಮಾಡಲಾಗುವುದು” ಎಂದು ತಿಳಿಸಿದರು.