ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯಲ್ಲಿ ಹಠಾತ್ ಸಂಭವಿಸಿದ್ದ ಮೇಘಸ್ಫೋಟದಲ್ಲಿ ಸಿಲುಕಿಕೊಂಡಿದ್ದ 50ಕ್ಕೂ ಹೆಚ್ಚು ಮಂದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಿಸಿದೆ ಎಂದು ಅಧಿಕಾರಿಗಳು ಶುಕ್ರವಾರ (ಆಗಸ್ಟ್ 25) ತಿಳಿಸಿದ್ದಾರೆ.
ಮಂಡಿ ಜಿಲ್ಲೆಯ ಶೆಹ್ನು ಗೌನಿ ಗ್ರಾಮದಲ್ಲಿ ಗುರುವಾರ ಮೇಘಸ್ಫೋಟ ಸಂಭವಿಸಿದ್ದು, ರಾಜ್ಯದ ಹಲವೆಡೆ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿಗಳು ಸುಮಾರು 15 ಕಿ.ಮೀವರೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ 15 ಮಕ್ಕಳು ಸೇರಿದಂತೆ ಭೂಕುಸಿತದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಲಾದ್ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿರುವ ಪರಿಣಾಮ ಬದ್ದಿ ಕೈಗಾರಿಕಾ ಪ್ರದೇಶ ಮತ್ತು ಪಿಂಜೆರ್ಗೆ ಸಂಪರ್ಕ ಕಲ್ಪಿಸುವ ಬದ್ದಿಯ ಮರ್ರಾನ್ವಾಲಾ ಸೇತುವೆ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಮರ್ರಾನ್ವಾಲಾ ಸೇತುವೆ ಕೊಚ್ಚಿಹೋಗಿದ್ದು, ಕಲ್ಕಾ-ಕಲುಜಾಂಡಾ ಬರೋಟವಾಲಾ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಬದಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮೋಹಿತ್ ಚವಾಲಾ ಹೇಳಿದ್ದಾರೆ.
ಹಿಮಾಚಲ ಪ್ರದೇಶ ರಾಜ್ಯದಲ್ಲಿ ಜೂನ್ 24 ರಿಂದ ಆಗಸ್ಟ್ 24ರವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 242 ಜನರು ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ 709 ರಸ್ತೆಗಳು ಹಾನಿಗೆ ಒಳಗಾಗಿವೆ.