ಬೆಂಗಳೂರು: ರಾಜಧಾನಿ ಬೆಂಗಳೂರಿನ 15ಕ್ಕೂ ಹೆಚ್ಚು ಕಡೆ ಬುಧವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭ್ರಷ್ಟರಿಗೆ ಶಾಕ್ ನೀಡಿದ್ದಾರೆ.
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಉದ್ಯಮಿಗಳ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತಡೊಗಿದ್ದಾರೆ. ವಿಜಯನಗರ, ಬಿಟಿಎಂ ಲೇಔಟ್ , ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿ ವೈದ್ಯೆ ನಿವಾಸದ ಮೇಲೆ ಐಟಿ ದಾಳಿಯಾಗಿದೆ. ಶಾಂತಿನಗರದ ವೈದ್ಯೆ ಮನೆಯಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಮೇಖ್ರಿ ವೃತ್ತ ಬಳಿಯ ಗಜರಾಜ ಜ್ಯುವೆಲರಿ ಶಾಪ್ ಮೇಲೂ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಅಂಗಡಿ ಬಾಗಿಲು ಮುಚ್ಚಿ ಒಳಗಡೆ ಪರಿಶೀಲನೆ ನಡೆಸಲಾಗುತ್ತಿದೆ. ಎರಡು ಇನ್ನೋವಾ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳ ಟೀಂ ತಲಾಶ್ ನಡೆಸುತ್ತಿದೆ.
ಕಳೆದ ತಿಂಗಳು ಸೆಪ್ಟೆಂಬರ್ 27ರಂದು ಬೆಂಗಳೂರಿನ ಹಲವು ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಬೆಂಗಳೂರಿನ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಆದಾಯ ತೆರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಅದಾಗಿ ಭರ್ತಿ ವಾರದ ನಂತರ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.