ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಆರಂಭಿಸಲಾಗಿರುವ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಮೀಜಿನಿ ವ್ಯವಸ್ಥೆಯ ಸೇವೆಗಳು ಲಭ್ಯವಾಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ (ಆಗಸ್ಟ್ 22) ಹೇಳಿದ್ದಾರೆ.
ರಾಜ್ಯದ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಆರಂಭಿಸಲಾಗಿರುವ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿ ʼ11 ಇ ನಕ್ಷೆʼ, ʼಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿʼ, ʼಭೂ ಪರಿವರ್ತನೆಗಾಗಿ ಅರ್ಜಿʼ ಮತ್ತು ʼಹದ್ದುಬಸ್ತುಗಾಗಿ ಅರ್ಜಿʼ ಸೇವೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
ಗ್ರಾಮೀಣ ಜನತೆಯು ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳನ್ನು ಪಡೆಯುವ ಅಗತ್ಯವಿದ್ದು, ದಾಖಲೆಗಳನ್ನು ತ್ವರಿತವಾಗಿ ಮತ್ತು ಸಮೀಪವಾಗಿ ಪಡೆದುಕೊಳ್ಳಲು 2016ರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಪ್ರಸ್ತುತ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ 17 ಸೇವೆಗಳನ್ನು ಹಾಗೂ ಕಂದಾಯ ಇಲಾಖೆ, ಕರ್ಮಿಯಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಧನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸೇವೆಗಳನ್ನು ಮತ್ತು ಆಧಾರ್ ಸೇವೆಗಳನ್ನು ಒದಗಿಸಲಾಗುತ್ತಿದೆ.
ಗ್ರಾಮೀಣ ಜನರು ಸರ್ಕಾರಿ ಸೇವೆಯನ್ನು ತಾಲ್ಲೂಕು ಅಥವಾ ಹೋಬಳಿ ಮಟ್ಟದಲ್ಲೇ ಪಡೆಯಬೇಕಾದುದರಿಂದ ಜನಸಂದಣಿ ಹೆಚ್ಚುವುದರ ಜೊತೆಗೆ ಕೇಂದ್ರದಲ್ಲಿ ತ್ವರಿತ ಗತಿಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ತೊಡಕಾಗುತ್ತಿತ್ತು. ಜೊತೆಗೆ ಸಾರ್ವಜನಿಕರು ಸೇವೆಗಳನ್ನು ಪಡೆಯಲು ಸಾಕಷ್ಟು ದೂರ ಕ್ರಮಿಸ ಬೇಕಾದುದರಿಂದ ಸಾಕಷ್ಟು ಹಣ ವ್ಯಯಿಸಬೇಕಾಗುತ್ತಿದ್ದ ಕಾರಣ ಈ ಸೇವೆಗಳನ್ನು ಗ್ರಾಮ ಪಂಚಾಯತಿಗಳ ಹಂತದಲ್ಲಿಯೇ ದೊರಕುವಂತೆ ಅನುಕೂಲ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳ ಅದಾಂಜು 3.7 ಕೋಟಿ ಜನರು ಅಂದರೆ 78 ಲಕ್ಷ ಕುಟುಂಬಗಳು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿ ವಿವಿಧ ಸೇವೆಗಳನ್ನು ಪಡೆಯುವಲ್ಲಿ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳು ಮಹ್ವತದ ಪಾತ್ರವಹಿಸಲಿವೆ ಎಂದೂ ಸಚಿವರು ಹೇಳಿದ್ದಾರೆ.