ಬೆಂಗಳೂರು :ಏ.೦7: ಬಂಡೀಪುರ ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನಲೆ ಯಲ್ಲಿ ಪ್ರಧಾನಿ ಮೋದಿ ಏಪ್ರಿಲ್ 9ರಂದು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಏ.6 ರಿಂದಲೇ ಬಂಡೀಪುರದಲ್ಲಿ ಸಫಾರಿ, ಹೋಂ ಸ್ಟೇ ಹಾಗೂ ರೆಸಾರ್ಟ್ ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಇನ್ನು ಬಂಡೀಪುರ ಹೊರವಲಯದ ಮೇಲುಕಾಮನಹಳ್ಳಿ ಬಳಿ ಮೂರು ಹೆಲಿಪ್ಯಾಡ್ಗಳನ್ನ ನಿರ್ಮಾಣಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಕಲ ಸಿದ್ದತೆ ನಡೆಸಲಾಗಿದ್ದು, ಪರೀಕ್ಷಾರ್ಥ ಹೆಲಿಕಾಪ್ಟರ್ ಗಳನ್ನ ಹಾರಾಟ ಮಾಡಲಾಗಿದೆ.
ಪ್ರಧಾನಿ ಮೋದಿ ಅವರು ಏಪ್ರಿಲ್ 9ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸಲಿದ್ದಾರೆ. ಹೀಗಾಗಿ ಗುರುವಾರದಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಬಂಡೀಪುರ ವ್ಯಾಪ್ತಿಯ ಎಲ್ಲ ಹೋಂ ಸ್ಟೇಗಳು, ರೆಸಾರ್ಟ್ ಗಳನ್ನು ಬಂದ್ ಮಾಡಲಾಗುತ್ತಿದೆ. ಈ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ರಸ್ತೆ ನಿರ್ವಹಣೆ, ಪೂರ್ವ ಸಿದ್ದತೆ, ಹಾಗೂ ಭದ್ರತೆ ದೃಷ್ಟಿಯಿಂದ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ರಸ್ತೆಗಳು ದುರಸ್ಥಿ ಕಾರ್ಯ
ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ಬಂಡೀಪುರವನ್ನು ತಲುಪುವ ಮಾರ್ಗದ ರಸ್ತೆಯ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಜತೆಗೆ ಸಪಾರಿ ಮಾರ್ಗದಲ್ಲಿಯೂ ಅಗತ್ಯ ಅನುಕೂಲ ಕಲ್ಪಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.
ಅಲೋಕ್ ಕುಮಾರ್ ಭೇಟಿ ಪರಿಶೀಲನೆ
ಪ್ರಧಾನಿ ನರೇಂದ್ರ ಮೋದಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುವ ಹಿನ್ನೆಲೆ ಇರುವುದರಿಂದ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ಕುಮಾರ್ ಅವರು ಬಂಡೀಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಪಾರಿ ಕೇಂದ್ರಭಾಗದಲ್ಲಿ ಮೂರು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದೆ.