ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿ ಹತ್ಯೆಗೈದವರ ವಿರುದ್ದ ಕಿಡಿಕಾರಿರುವ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್, ಮೋದಿಗೆ ಅಂಬಾನಿ ಮೊಮ್ಮಗನನ್ನು ನೋಡಲಿ ಸಮಯವಿದೆ ಆದರೆ ರೈತರ ಸಮಸ್ಯೆಯನ್ನು ಆಲಿಸಲು ಸಮಯವಿಲ್ಲ ಎಂದು ಕಿಡಿಕಾರಿದ್ದಾರೆ. ಈ ನಡೆಯನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಮೌನ ಪ್ರತಿಭಟನೆ ಮಾಡುವುದಾಗಿ ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ಕೆಪಿಸಿಸಿ ಕಛೇರಿಯ ಬಳಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ವಿಮಾನದಲ್ಲಿ ಹೋಗಿ ಅಂಬಾನಿಯವರ ಮೊಮ್ಮಗನನ್ನು ನೋಡಲು ಸಮಯವಿದೆ, ಆದರೆ, ದೆಹಲಿ ಗಡಿಯಲ್ಲಿ ಕಳೆದ 10 ತಿಂಗಳಿಂದ ಪ್ರತಿಭಟನೆ ಮಾಡುತ್ತಿರುವ ರೈತರ ಜೊತೆ, ಲಖಿಂಪುರದಲ್ಲಿ ಮೃತಪಟ್ಟ ರೈತರ ಕುಟುಂಬದ ಜೊತೆ ಮಾತನಾಡಲು ಸಮಯ ಇಲ್ಲದಿರುವುದು ನಾಚಿಕೆಗೇಡು ಎಂದು ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿ ಹತ್ಯೆಗೈದಿದ್ದಾರೆ. ಆದರೂ ಅವರನ್ನು ಬಂಧಿಸದೇ ರಾಜ ಮರ್ಯಾದೆ ನೀಡಲಾಗಿದೆ. ಇದನ್ನು ಗಮನಿಸಿದರೆ ಸರ್ಕಾರ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.