ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಬಂಡವಾಳಶಾಹಿಗಳ ಗುಲಾಮಗಿರಿ ಮಾಡುತ್ತಿದೆ. ಪ್ರಧಾನಿ ಅವರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತೇವೆ ಎಂದು ಅದಾನಿ ಮತ್ತು ಅಂಬಾನಿಗೆ ಮಾತು ಕೊಟ್ಟಿದ್ದಾರೆ, ಹೀಗಾಗಿ ರೈತರು ಎಷ್ಟೇ ಪ್ರತಿಭಟನೆ ನಡೆಸಿದರೂ ಅವುಗಳನ್ನು ಕೇಂದ್ರ ಸರ್ಕಾರ ವಾಪಾಸು ಪಡೆಯುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಬಗೆಹರಿಸುವ ನೈಜ ಕಾಳಜಿ ಇದ್ದಿದ್ದರೆ, ರೈತರ ನಡುವೆ ಹನ್ನೊಂದು ಸುತ್ತು ಮಾತುಕತೆ ನಡೆಸುವ ಅಗತ್ಯ ಬೀಳುತ್ತಿತ್ತಾ? ಸರ್ಕಾರಕ್ಕೆ ರೈತರ ಹಿತವೇ ಮುಖ್ಯವಾಗಿದ್ದರೆ ಕಾಯ್ದೆ ವಾಪಾಸು ಪಡೆಯಬೇಕಿತ್ತಲ್ಲವೇ? ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಎರಡು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ನೂರಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರೂ ರೈತ ವಿರೋಧಿ ಕಾನೂನುಗಳನ್ನು ವಾಪಸು ಪಡೆಯಲು ನಿರಾಕರಿಸುತ್ತಿರುವ ಪ್ರಧಾನಿ ಅವರಿಗೆ ತನ್ನ ಪ್ರತಿಷ್ಠೆಯೇ ಮುಖ್ಯವಾಗಿದೆ. ಅವರ 56 ಇಂಚಿನ ಎದೆಯೊಳಗೆ ಬಡವರಿಗಾಗಿ ಮಿಡಿಯುವ ಹೃದಯವೇ ಇಲ್ಲ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದವನು ಬಿಜೆಪಿ ಕಾರ್ಯಕರ್ತ ಎಂಬುದು ಪುರಾವೆ ಸಹಿತ ಸಾಬೀತಾಗಿದೆ. ಈ ಹೊತ್ತಿನಲ್ಲಿ ಬಿಜೆಪಿಯ ನಾಯಕರು ರೈತರಿಗೆ ಭಯೋತ್ಪಾದಕರ ಬೆಂಬಲ ಇದೆಯೆಂದು ಹೇಳುತ್ತಿರುವುದು ನಾಚಿಕೆಗೇಡು. ರೈತ ಚಳವಳಿಯಲ್ಲಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇದ್ದರೆ ಅವರನ್ನು ಬಂಧಿಸಬೇಕಿತ್ತಲ್ಲವೇ? ಎಂದಿದ್ದಾರೆ.