ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಿಗದಿ ಮಾಡಿದಾಗಲೇ ಬಿಜೆಪಿ ಸೋಲುವ ಸಾಧ್ಯತೆಯಿದೆ ಎನ್ನುವುದು ಬಹುತೇಕ ರಾಜಕೀಯ ವಿಶ್ಲೇಷಕರ ಮಾತಾಗಿತ್ತು. ಸೋಲುವ ಭಯದಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ನಾಯಕರು ಪ್ರಚಾರ ಮಾಡಲು ಅನುಕೂಲ ಆಗುವ ವೇಳಾಪಟ್ಟಿ ನಿಗದಿ ಮಾಡಿದ್ದಾರೆ ಎನ್ನುವ ಮಾತುಗಳು ಬಹಿರಂಗ ವೇದಿಕೆಗಳಲ್ಲೇ ಹೊರಬಿದ್ದವು. ಅದರ ಜೊತೆಗೆ ಮೊದಲ ಹಂತದ ಚುನಾವಣೆ ಮುಕ್ತಾಯ ಆಗುತ್ತಿದ್ದಂತೆ ಬಿಜೆಪಿ ಪಾಲಿಗೆ ಬರಸಿಡಿಲು ಹೊಡೆದಂತಹ ಅನುಭವ ಆಗಿತ್ತು. ಮೊದಲ ಹಂತದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ತೀರಾ ಕಳಪೆ ಸಾಧನೆ ಮಾಡಿದೆ ಅನ್ನೋ ಅಂಶ ಬಿಜೆಪಿ ಹೈಕಮಾಂಡ್ ಅಂಗಳ ಪ್ರವೇಶ ಮಾಡಿದೆ ಎನ್ನುವ ಮಾತುಗಳು ಚರ್ಚೆ ನಡೆದವು. ಇದೀಗ ಶನಿವಾರ ಕಡೇ ಹಂತದ ಮತದಾನ ನಡೆಯುತ್ತಿದೆ.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡಿರುವ ವಾರಾಣಸಿ ಸೇರಿದಂತೆ 57 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 8 ರಾಜ್ಯಗಳ ಪೈಕಿ, ಬಿಹಾರ 08 ಕ್ಷೇತ್ರ, ಹಿಮಾಚಲ ಪ್ರದೇಶ 04 ಕ್ಷೇತ್ರ, ಒಡಿಶಾದ 6 ಕ್ಷೇತ್ರ, ಪಂಜಾಬ್ನ 13 ಕ್ಷೇತ್ರ, ಉತ್ತರ ಪ್ರದೇಶ 07 ಕ್ಷೇತ್ರ, ಪಶ್ಚಿಮ ಬಂಗಾಳ 09 ಕ್ಷೇತ್ರ, ಜಾರ್ಖಂಡ್ 03 ಕ್ಷೇತ್ರ, ಚಂಢೀಘರ್ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಆದರೆ ಈಗಾಗಲೇ ಮತದಾನ ನಡೆದಿರುವ ಕ್ಷೇತ್ರಗಳ ಪೈಕಿ ಯಾವೆಲ್ಲಾ ಪಕ್ಷಗಳು ಗೆಲುವಿನ ದಡ ಮುಟ್ಟಿವೆ ಅನ್ನೋದು ಶನಿವಾರ ಸಂಜೆ ನಡೆಯುವ ಮತದಾನೋತ್ತರ ಸಮೀಕ್ಷೆಯಿಂದ ಗೊತ್ತಾಗಲಿದೆ. Exit poll ಶನಿವಾರ ಸಂಜೆ ಅಧಿಕೃತವಾಗಿ ಹೊರಬೀಳಬಹುದು. ಆದರೆ ಈಗಾಗಲೇ ಗುಪ್ತ ಸಂಗತಿ ಬಾಯಿಯಿಂದ ಬಾಯಿಗೆ ಫಸರಿಸಿದ್ದು, ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಭಾರೀ ಸಾಧನೆ ಮಾಡಿದೆ ಎನ್ನಲಾಗ್ತಿದೆ.
ಕಳೆದ ಬಾರಿ ಕೇವಲ 50ರ ಆಸುಪಾಸಿನಲ್ಲಿ ನಿಂತು ಹೋಗಿದ್ದ ಕಾಂಗ್ರೆಸ್ ಪಾರ್ಟಿ ಈ ಬಾರಿ ಶತಕ ದಾಟುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನುವುದು ರಾಜಕೀಯ ಬಲ್ಲವರ ಮಾತಾಗಿದೆ. ಕರ್ನಾಟಕದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಬಾರದೆ ಇದ್ದರೂ ದೇಶದಲ್ಲಿ ಕಾಂಗ್ರೆಸ್ಗೆ ಜನ ಬೆಂಬಲಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ‘ಚಾರ್ ಸೋ ಪಾರ್’ ಘೋಷಣೆ ಮಹತ್ವ ಕಳೆದುಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ದಾರಿ ತಪ್ಪಿದ ಹೇಳಿಕೆಗಳೇ ಬಿಜೆಪಿ ಸೋಲಿನ ಲಕ್ಷಣ ಎನ್ನುವುದು ಬಹುತೇಕ ಹಿರಿಯ ನಾಯಕರ ಮಾತಾಗಿದೆ. ಆಂತರಿಕ ವರದಿಯ ಅಂಕಿ ಅಂಶಗಳು ನಕಾರಾತ್ಮಕವಾಗಿ ಬಂದಿದ್ದರಿಂದಲೇ ಈ ಬಾರಿ ಪ್ರಧಾನಿ ಮೋದಿ ತೀರಾ ಕೆಳಮಟ್ಟಕ್ಕೆ ಇಳಿದು ಭಾಷಣ ಮಾಡಿದ್ರು ಎನ್ನುವುದನ್ನು ಮೋದಿ ಮಾತುಗಳೇ ಸಾಕ್ಷೀಕರಿಸುತ್ತಿವೆ ಎನ್ನಬಹುದು.
ಸಟ್ಟಾ ಬಜಾರ್ ಅಂದರೆ ಜೂಜು ಮಾರುಕಟ್ಟೆ ಇಲ್ಲೀವರೆಗೂ ಕೊಟ್ಟಿರುವ ಅಂಕಿ ಅಂಶದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ NDA ಹಾಗು ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಬಹುತೇಕ ಸಮಬಲ ಸಾಧಿಸಲಿದೆ ಎನ್ನುತ್ತಿವೆ. ಆಗ ಬೇರೆ ಪಾರ್ಟಿಗಳ ಬೆಂಬಲ ಅತ್ಯಗತ್ಯ. ಆಗ ನರೇಂದ್ರ ಮೋದಿ ನಾಯಕತ್ವದಲ್ಲಿ ಪ್ರಧಾನಿ ಆಗುವುದು ಸಾಧ್ಯವೇ ಇಲ್ಲ. ಮೋದಿ ನಾಯಕತ್ವವನ್ನು ಹೊರಗಿಟ್ಟು ಬೇರೊಬ್ಬ ನಾಯಕ ಆಯ್ಕೆ ಆನಿವಾರ್ಯ. ಇನ್ನು INDIA ಒಕ್ಕೂಟವೇ ಅಧಿಕಾರ ಹಿಡಿಯುವ ಸಂದರ್ಭ ಒದಗಿ ಬಂದರೆ NDA ಒಕ್ಕೂಟದಲ್ಲಿ ಇರುವ ಸಣ್ಣಪುಟ್ಟ ಪಕ್ಷಗಳೇ ಬೆಂಬಲ ನೀಡಬಹುದು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಪದೇ ಪದೇ ಮೋದಿ ಈ ಬಾರಿ ಪ್ರಧಾನಿ ಆಗಲ್ಲ ಎಂದು ಗಟ್ಟಿ ಮಾತುಗಳಲ್ಲಿ ಹೇಳಿರುವುದು. ಇದು ಸತ್ಯವೂ ಆಗಬಹುದು ಎನ್ನುತ್ತಿದೆ ಸದ್ಯದ ಪರಿಸ್ಥಿತಿ.
ಕೃಷ್ಣಮಣಿ