ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಇಂದು ಮಂಡನೆ ಆಗಲಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸತತ 5ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುವುದರಿಂದ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಉದ್ದೇಶದಿಂದ ಆದರೂ ಒಂದೆರಡು ಯೋಜನೆಗಳನ್ನು ಹೆಚ್ಚುವರಿಯಾಗಿ ಸೇರಿಸುವುದರಲ್ಲಿ ಅಚ್ಚರಿಯೇನಿಲ್ಲ. ಇನ್ನು ಕೊರೊನಾ ಸಮಯದಲ್ಲಿ ಹಳಿ ತಪ್ಪಿದ್ದ ದೇಶದ ಆರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಮಹತ್ವದ ಜವಾಬ್ದಾರಿ ನಿರ್ಮಲಾ ಸೀತಾರಾಮನ್ ಅವರ ಮೇಲಿದ್ದು, ಯಾವ ಯಾವ ವಲಯಗಳಿಗೆ ಚೇತರಿಕೆ ಆಗುವಂತೆ ಮಾಡ್ತಾರೆ ಅನ್ನೋ ಚರ್ಚೆ ನಡೆದಿದೆ. ಇನ್ನು ಕೃಷಿ ವಲಯ ಸೇರಿದಂತೆ ಸಾಕಷ್ಟು ವಿಭಾಗಗಳು ಕೇಂದ್ರ ಬಜೆಟ್ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿದ್ದು, ದುಡಿಯುವ ವರ್ಗ ಅಗತ್ಯ ವಸ್ತುಗಳ ಬೆಲೆ ಇಳಿಕೆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದೆ.
ಸಂಸತ್ನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿರುವ ನಿರ್ಮಲಾ ಸೀತಾರಾಮನ್..!
ನಿನ್ನೆಯಿಂದ ಆರಂಭ ಆಗಿರುವ ಕೇಂದ್ರ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ನಂತದ ಸಂಸತ್ನಲ್ಲಿ ನಿರ್ಮಲಾ ಸೀತಾರಾಮನ್, ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. 2023-24ನೇ ಸಾಲಿನಲ್ಲಿ ಶೇಕಡ 6.5ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಹೊಂದಲಾಗಿದೆ. 2023-24ನೇ ಸಾಲಿನಲ್ಲಿ ಶೇಕಡ 6 ರಿಂದ 6.8ರಷ್ಟು GDP ಏರಿಕೆ ಆಗುವ ನಿರೀಕ್ಷೆ ಇದೆ. ಕುಸಿದಿದ್ದ ಆರ್ಥಿಕತೆ ಮತ್ತೆ ಹಳಿಗೆ ಬರಲಿದೆ, ಕೋವಿಡ್ ನಂತರ ಭಾರತದ ಆರ್ಥಿಕ ಚೇತರಿಕೆ ಹಾದಿಯಲ್ಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಭಾರತಕ್ಕೆ ಬಂಡವಾಳ ಹರಿದುಬರುವ ನಿರೀಕ್ಷೆ ಹೊಂದಲಾಗಿದ್ದು, ಖಾಸಗಿ ವಲಯದಲ್ಲಿ ಹೂಡಿಕೆ ಹೆಚ್ಚಳ ಆಗುವ ಸಾಧ್ಯತೆ ಇದೆ. ದೀರ್ಘಾವಧಿ ಹಣದುಬ್ಬರದಿಂದ ಆರ್ಥಿಕತೆ ಬಿಗಿಯಾಗಿದ್ದು, ರೂಪಾಯಿ ಮೌಲ್ಯಕ್ಕೆ ಇನ್ನಷ್ಟು ಸವಾಲು ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬ್ಯಾಂಕ್ಗಳ ಸಾಲದ ಬೆಳವಣಿಗೆ ಚುರುಕಾಗಿದ್ದು, ಸುಭದ್ರ ಹಣದುಬ್ಬರಕ್ಕಾಗಿ ವೆಚ್ಚಗಳ ಮೇಲೆ ನಿಯಂತ್ರಣ ಹೊಂದಲಾಗಿದೆ ಎಂದಿದ್ದಾರೆ.

ಕೇಂದ್ರ ಬಜೆಟ್ನಲ್ಲಿ ಜನಸಾಮಾನ್ಯರ ನಿರೀಕ್ಷೆಗಳೇನು?
ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಪ್ರಮುಖವಾಗಿ ಮಹಿಳೆಯರಿಗೆ ತಲೆಬಿಸಿ ತಂದಿರುವ ಗ್ಯಾಸ್ ಸಿಲಿಂಡರ್ಗಳ ಬೆಲೆ ಇಳಿಕೆ ಆಗಬೇಕಿದೆ. ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳ ಮೇಲಿನ GST ಇಳಿಕೆ ಮಾಡುವ ನಿರೀಕ್ಷೆ ಇದೆ. ಬಿಡಿಭಾಗಗಳ ಮೇಲಿನ GST ಇಳಿದರೆ ವಾಹನಗಳ ದರ ಇಳಿಕೆ ಆಗಲಿದೆ. ನಿರೀಕ್ಷೆಯಂತೆ ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು ಸಿಗಲಿದ್ದು, ಆತ್ಮನಿರ್ಭರ್ ಯೋಜನೆ ಅಡಿ ಸೇನಾ ಸಾಮಗ್ರಿ ಉತ್ಪಾದನೆಗೆ ಒತ್ತು ನೀಡುವ ಯೋಜನೆಗಳ ಘೋಷಣೆ ಆಗುವ ನಿರೀಕ್ಷೆ ಇದೆ. ವಿದ್ಯುತ್ ಸಬ್ಸಿಡಿ, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದ್ದು, ತೆರಿಗೆ ಮಿತಿ ಇಳಿಕೆ ಮಾಡುವ ಮೂಲಕ ದುಡಿಯುವ ವರ್ಗಕ್ಕೆ ಸಿಹಿ ಸಿಗುವ ಸಾಧ್ಯತೆ ದಟ್ಟವಾಗಿದೆ. ವೈಯಕ್ತಿಕ ಸಾಲಗಳ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆ ಇದ್ದು, ಪ್ರವಾಸೋದ್ಯಮ ಕ್ಷೇತ್ರ ತೆರಿಗೆ ವಿನಾಯ್ತಿ ನಿರೀಕ್ಷೆಯಲ್ಲಿದೆ. ಟೆಕ್ಸ್ಟೈಲ್ಸ್ ಉದ್ಯಮ, ಎಲೆಕ್ಟ್ರಾನಿಕ್ಸ್ ಉತ್ಪಾದಕ ಕ್ಷೇತ್ರ ಕೂಡ ಉತ್ತೇಜನ ನಿರೀಕ್ಷೆಯಲ್ಲಿದೆ. ಸ್ಟಾರ್ಟಪ್ಗಳಿಗೆ ಬೂಸ್ಟ್ ಸಿಗುವ ಸಾಧ್ಯತೆಯಿದೆ.
ಕರ್ನಾಟಕದಿಂದಲೇ ಆಯ್ಕೆಯಾಗಿದ್ದಾರೆ ನಿರ್ಮಲಾ..!
ನಿರ್ಮಲಾ ಸೀತಾರಾಮನ್ ತಮಿಳುನಾಡು ಮೂಲದವರೇ ಆಗಿದ್ದರೂ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ 2 ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ರೈಲ್ವೆ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನು ಬೆಂಗಳೂರು ಲೋಕಲ್ ಟ್ರೈನ್ ಯೋಜನೆಗೆ ಈ ಬಾರಿ ಭೂಮಿ ಪೂಜೆ ಮಾಡುವ ಹಂತದ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ, ಫೆಬ್ರವರಿ 6ರಂದು ಮೋದಿ ತುಮಕೂರಿಗೆ ಆಗಮಿಸುತ್ತಿದ್ದಾರೆ. ಕರ್ನಾಟಕಕ್ಕೆ ವಿಶೇಷ ಸ್ಥಾನಮಾನದಲ್ಲಿ ಸಾಕಷ್ಟು ಯೋಜನೆ ಘೋಷಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವುದಕ್ಕಾದರೂ ಯೋಜನೆಗಳ ಹೆಸರು ಬಜೆಟ್ನಲ್ಲಿ ಸೇರಿಸಲಾಗಿರುತ್ತದೆ. ಆದರೆ ಜಾರಿಯಾಗುವಂತಹ ಯೋಜನೆಗಳನ್ನು ಎಷ್ಟು ಕೊಡುತ್ತಾರೆ ಅನ್ನೋದೇ ಈಗ ಇರುವ ಕುತೂಹಲ.







