ಬರ ಪರಿಹಾರ ನೀಡಲು ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣವಿದೆ. ಅದರೆ, ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರದ ಹಣ ಸಿಗದಿದ್ದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಕಾರಣ ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದರು.
ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಎಚ್ಚರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸುವಂತೆ ಕಳೆದ ಎರಡು ತಿಂಗಳಿನಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರಂತರವಾಗಿ ಸೂಚಿಸಲಾಗುತ್ತಿದೆ. ಆದರೂ, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ಮಾಹಿತಿ ಶೇ.70ನ್ನೂ ಮೀರಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರಿಗೆ ಅನ್ಯಾಯವಾಗಲಿದೆ” ಎಂದು ಅಸಮಾಧಾನ ಹೊರಹಾಕಿದರು.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ಸಾಧನೆ ತೀರಾ ಕಳಪೆಯಾಗಿದೆ. ಬರ ಪರಿಹಾರ ಹಣವನ್ನು ನೀಡಲು ರಾಜ್ಯ ಸರ್ಕಾರದ ಸಿದ್ದವಾಗಿದೆ. ಖಜಾನೆಯಲ್ಲಿ ಹಣವೂ ಇದೆ. ಆದರೆ, ಪರಿಹಾರ ಫ್ರೂಟ್ಸ್ ದತ್ತಾಂಶವನ್ನು ಆಧರಿಸಿರುವ ಕಾರಣ ಜಿಲ್ಲಾಧಿಕಾರಿಗಳು ಮಾಡುವ ಸಣ್ಣ ತಪ್ಪೂ ಸಹ ರೈತರ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಇನ್ನಾದರೂ ಆಂದೋಲನ ಮಾದರಿಯಲ್ಲಿ ಕೆಲಸ ಮಾಡಬೇಕಾಗಿದೆ. ಶೀಘ್ರದಲ್ಲಿ ತಾಲೂಕು ಹೋಬಳಿ ಸಭೆ ನಡೆಸಿ ಎಲ್ಲಾ ಅಧಿಕಾರಿಗಳನ್ನು ಸ್ಥಳ ವೀಕ್ಷಣೆಗೆ ಕಳುಹಿಸಿ ಡಿಸೆಂಬರ್. 22ರ ಒಳಗಾಗಿ ರೈತರ ಜಮೀನಿನ ಸಂಪೂರ್ಣ ಮಾಹಿತಿಯನ್ನು ನಮೂದಿಸಿ ಎಂದು ಸಮಯದ ಗಡುವು ನೀಡಿದರು.
ಇದೇ ಸಮಯದಲ್ಲಿ ನೀರಿನ ಸಮಸ್ಯೆಯನ್ನು ಸೂಕ್ತ ಮಾದರಿಯಲ್ಲಿ ನಿಭಾಯಿಸಿದ್ದಕ್ಕಾಗಿ ಎಲ್ಲಾ ಜಿಲ್ಲಾಧಿಕಾರಿಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದ ಸಚಿವರು, “ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಜಿಲ್ಲೆಗಳಲ್ಲಿ ಅಧಿಕಾರಿಗಳು ಈಗಾಗಲೂ ಖಾಸಗಿ ಬೋರ್ ವೆಲ್ ಗಳನ್ನು ಗುರುತಿಸಿದ್ದಾರೆ. ಟ್ಯಾಂಕರ್ ಗಳಿಗೆ ಟೆಂಡರ್ ಅನ್ನೂ ಸಹ ಕರೆಯಲಾಗಿದೆ. ಇದು ನಿಜಕ್ಕೂ ಉತ್ತಮವಾದ ಕೆಲಸ.
ಮುಂದಿನ ಬೇಸಿಗೆಗೆ ನೀರಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಅಧಿಕಾರಿಗಳ ಈ ಕ್ರಮ ಸಹಕಾರಿಯಾಗಲಿದೆ. ಆದರೆ, ಬರ ಘೋಷಿಸಲಾಗಿದ್ದರೂ ರಾಜ್ಯದ 134 ತಾಲೂಕುಗಳಲ್ಲಿ ಈವರೆಗೆ ಟಾಸ್ಕ್ ಪೋರ್ಸ್ ಸಭೆ ನಡೆಸಿಲ್ಲ. ಹೀಗಾಗಿ ಅಧಿಕಾರಿಗಳು ಈ ಬಗ್ಗೆಯೂ ಗಮನ ನೀಡಬೇಕು” ಎಂದು ಅವರು ಸೂಚಿಸಿದರು.
ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ ನೀಡಿ:
ಸಭೆಯಲ್ಲಿ ಅರ್ಹ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಕುರಿತೂ ಚರ್ಚೆ ನಡೆಸಲಾಯಿತು. ಈ ಬಗ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವರು, “ಬಡವರಿಗೆ ಸಹಾಯಮಾಡುವ ನಿಟ್ಟಿನಲ್ಲಿ ಅರ್ಹ ಕಂದಾಯ ಗ್ರಾಮಗಳನ್ನು ಶೀಘ್ರ ಘೋಷಿಸಿ ಹಕ್ಕುಪತ್ರ ವಿತರಿಸಿ” ಎಂದು ತಾಕೀತು ಮಾಡಿದರು.
ಈಗಾಗಲೇ ಗುರುತಿಸಲಾಗಿರುವ ಕೆಲವು ಕಂದಾಯ ಗ್ರಾಮಗಳನ್ನು ಕೈಬಿಡುವ ಬಗ್ಗೆ ಕೆಲವು ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಿದ್ದೀರಿ. ಅಸಲಿಗೆ ಅರಣ್ಯ ಪ್ರದೇಶ ಅಥವಾ ಕೆರೆ ಜಾಗಗಳನ್ನು ಕಂದಾಯ ಗ್ರಾಮಗಳ ಪಟ್ಟಿಯಿಂದ ಕೈಬಿಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಕೆಲವು ಅಸಂಬದ್ಧ ತಕರಾರುಗಳ ಕಾರಣಕ್ಕೆ ಕಂದಾಯ ಗ್ರಾಮಗಳನ್ನು ಕೈಬಿಡಬೇಡಿ. ಹೀಗೆ ಮಾಡುವುದರಿಂದ ಬಡವರಿಗೆ ತೊಂದರೆಯಾಗಲಿದೆ ಎಂದರು.
ಹೆಚ್ಚುವರಿಯಾಗಿ ಹೊಸ ಕಂದಾಯ ಗ್ರಾಮಗಳ ಘೋಷಣೆಗಾಗಿ ಗುಲಬುರ್ಗಾ ಜಿಲ್ಲೆಯಲ್ಲಿ174, ತುಮಕೂರು ಜಿಲ್ಲೆ 40, ವಿಜಯನಗರ ಜಿಲ್ಲೆಯಿಂದ 29 ಪ್ರಸ್ತಾವನೆ ಬಂದಿರುವುದನ್ನು ಸ್ವಾಗತಿಸಿದ ಸಚಿವರು, ಪ್ರತಿ ತಾಲೂಕಿನಲ್ಲೂ ನಾವು ಗುರುತಿಸಿರುವುದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕಂದಾಯ ಗ್ರಾಮಗಳಿರುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಸ್ಥಳೀಯ ಶಾಸಕರ ಜೊತೆಗೆ ಚರ್ಚಿಸಿ. ಮತ್ತಷ್ಟು ಹೊಸ ಕಂದಾಯ ಗ್ರಾಮಗಳ ಘೋಷಣೆಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು.
ಅಲ್ಲದೆ, ಕಂದಾಯ ಗ್ರಾಮಗಳ ಘೋಷಣೆಯ ಜೊತೆಜೊತೆಗೆ ಅಧಿಕಾರಿಗಳು ಹಕ್ಕುಪತ್ರಗಳನ್ನೂ ಸಿದ್ದಪಡಿಸಿಕೊಳ್ಳಬೇಕಿದೆ. ಈಗಾಗಲೇ ಸರ್ಕಾರ 2.11 ಲಕ್ಷ ಹಕ್ಕುಪತ್ರಗಳನ್ನು ವಿತರಿಸಬೇಕಿದ್ದು, ಜನವರಿ ತಿಂಗಳಿಗೆ ಕನಿಷ್ಟ 1.25 ಲಕ್ಷ ಹಕ್ಕುಪತ್ರಗಳನ್ನು ವಿತರಿಸಬೇಕಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಕೊಡಬೇಕಿದೆ ಎಂದರು.
ಬಗರ್ ಹುಕುಂ ಆ್ಯಪ್ ಬಿಡುಗಡೆ
ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲೇ ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಬಗರ್ ಹುಕುಂ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು.
ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.
ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ಹಾಗೂ ಅರ್ಜಿಗಳ ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ.
ಆ್ಯಪ್ ಹೇಗೆ ಕೆಲಸ ಮಾಡುತ್ತೆ?
ಗ್ರಾಮ ಲೆಕ್ಕಿಗ ಸ್ಥಳಕ್ಕೆ ತೆರಳಿ ಈ ಆ್ಯಪ್ ಮೂಲಕ ಜಿಯೋ ಫೆನ್ಸ್ ಮಾಡಿ ಆ ಮಾಹಿತಿಯನ್ನು ಕಂದಾಯ ನಿರೀಕ್ಷಕ ಹಾಗೂ ಸರ್ವೇ ಇಲಾಖೆ ಲಾಗಿನ್ ಗೆ ಕಳುಹಿಸುತ್ತಾರೆ. ಇದರ ಸಹಾಯದಿಂದ ತಹಶೀಲ್ದಾರರು ಸ್ಯಾಟಲೈಟ್ ಇಮೇಜ್ ಪಡೆದು ನಿಜಕ್ಕೂ ಅಲ್ಲಿ ಕೃಷಿ ನಡೆಸುತ್ತಿದ್ದಾರ? ಎಂಬ ಮಾಹಿತಿ ಕಲೆಹಾಕುತ್ತಾರೆ. ಅಲ್ಲದೆ ಆ ಇಮೇಜ್ ಜೊತೆಗೆ ಎಲ್ಲಾ ಮಾಹಿತಿಯನ್ನು ಬಗರ್ ಹುಕುಂ ಕಮಿಟಿ ಮುಂದೆ ಸಲ್ಲಿಸಿ ಓಟಿಪಿ ಮೂಲಕ ಕೆವೈಸಿ ಮಾಡುವ ಮೂಲಕ ಋಜುವಾತು ಮಾಡುತ್ತಾರೆ.
ನಂತರ ಅರ್ಹ ಫಲಾನುಭವಿಗಳಿಗೆ ಪೇಮೆಂಟ್ ನೊಟೀಸ್ ನೀಡಿ ಹಣ ಪಾವತಿಯಾಗುತ್ತಿದ್ದಂತೆ ಅವರಿಗೆ ಹೊಸ ಸರ್ವೇ ನಂಬರ್ ಹಾಗೂ ಡಿಜಿಟಲ್ ಇ-ಸಾಗುವಳಿ ಚೀಟಿ ನೀಡಲಾಗುವುದು.