ಬೆಂಗಳೂರು : ಬಿಜೆಪಿಯ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಇಂದು ಕೇಸರಿ ಪಾಳಯವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಇಂದು ಬಿಜೆಪಿಯ ಒಂದು ವಿಕೆಟ್ ಪತನವಾದಂತಾಗಿದೆ. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಪುಟ್ಟಣ್ಣ ಇಂದು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೇರಿದಂತೆ ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಪುಟ್ಟಣ್ಣ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ .

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪುಟ್ಟಣ್ಣ, ಬಿಜೆಪಿಯ ಎಂಎಲ್ಸಿ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಬಿಜೆಪಿಯು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿಲ್ಲ. ಸಿಎಂ ಬೊಮ್ಮಾಯಿಯನ್ನು ಭೇಟಿಯಾಗಿ ಬಿಜೆಪಿ ನಾಯಕರನ್ನು ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದೇನೆ. ಸಭಾಪತಿಗಳಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿ ಇಲ್ಲಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.





