ಮೊನ್ನೆ ರಾಜ್ಯ ಚುನಾವಣಾ ಆಯೋಗವು 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆಯನ್ನು ಘೋಷಣೆ ಮಾಡಿದೆ.
25 ಎಂಎಲ್ಸಿಗಳ ಅವಧಿ ಮುಗಿಯುತ್ತಿರುವ ಕಾರಣ ಚುನಾವಣಾ ಆಯೋಗ ಸಹಜ ಕ್ರಮದಂತೆ ಚುನಾವಣಾ ದಿನಾಂಕವನ್ನು ನಿಗದಿ ಮಾಡಿದೆ.
ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳು, ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆದಿಲ್ಲ. ಬಹುಪಾಲು ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆಗಳಿಗೂ ಇನ್ನೂ ಚುನಾವಣೆ ನಡೆದಿಲ್ಲ. ಅಂದರೆ, ಜಿಪಂ, ತಾಪಂ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರಿಲ್ಲ. ಈ ಸದಸ್ಯರೆಲ್ಲರೂ ಡಿಸೆಂಬರ್ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಾಗಿರಬೇಕಿತ್ತು. ಆದರೆ ಅವರೇ ಇಲ್ಲ!
ಹೀಗಾಗಿ ಚುನಾವಣಾ ಆಯೋಗ ಈಗ ಚುನಾವಣೆ ಘೋಷಿಸಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.
ಶೇ. 25ರಷ್ಟು ಮತದಾರರು ಹೊರಗೆ!
ಈಗ ಖಾಲಿಯಾಗಿರುವ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಮತದಾರರು. ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಸದಸ್ಯರು 25 ಎಂಎಲ್ಸಿಗಳನ್ನು ಆರಿಸಬೇಕಿದೆ.
ಆದರೆ, ತಾಂತ್ರಿಕ ಮತ್ತು ಕಾನೂನಾತ್ಮಕ ಕಾರಣಗಳಿಂದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳಿಗೆ ಇನ್ನೂ ಚುನಾವಣೆ ನಡೆದಿಲ್ಲ. ನೂರಾರು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಚುನಾವಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಈಗ ಸಂಪೂರ್ಣ ಸಕ್ರಿಯವಾಗಿರುವುದು ಗ್ರಾಮ ಪಂಚಾಯತಿಗಳು ಮಾತ್ರ. ಅಂದರೆ ಗ್ರಾಮ ಪಂಚಾಯತಿಯ ಸದಸ್ಯರನ್ನು ಹೊರತುಪಡಿಸಿದರೆ ಉಳಿದ ಸದಸ್ಯ-ಮತದಾರರು ಈಗ ಅಸ್ತಿತ್ವದಲ್ಲಿ ಇಲ್ಲ. ಹೀಗೆ ಶೇ. 25ರಷ್ಟು ಮತದಾರರ ಮತದಾನದ ಹಕ್ಕಿಗೆ ಅವಕಾಶ ಇಲ್ಲದಿರುವಾಗ ಎಂಎಲ್ಸಿ ಚುನಾವಣೆಯನ್ನು ಮುಂದೂಡಬಹುದಿತ್ತಲ್ಲವೇ? ಈ ಪ್ರಶ್ನೆ ಇಟ್ಟುಕೊಂಡು ಯಾರಾದರೂ ನ್ಯಾಯಾಲಯದ ಮೊರೆ ಹೋದರೆ, ಚುನಾವಣಾ ಆಯೋಗ ವಿವರಣೆ ನೀಡಬೇಕಾಗುತ್ತದೆ.
ಗ್ರಾಪಂ ಚುನಾವಣಾ ವಿವಾದ
ಕಳೆದ ವರ್ಷ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಮುಂದೂಡಿದ ಕಾರಣಕ್ಕೆ ಹೈಕೋರ್ಟ್ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್ ಕಾರಣ ಹೇಳಿ ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಮುಂದೂಡಿದ್ದರ ವಿರುದ್ಧ ಗದಗಿನ ಮಾಜಿ ಶಾಸಕ ಡಿ. ಆರ್. ಪಾಟೀಲ್ ಮತ್ತು ಇತರರು ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಚುನಾವಣಾ ಆಯೋಗದ ಕ್ರಮವನ್ನುಆಕ್ಷೇಪಿಸಿದ್ದ ಹೈಕೋರ್ಟ್ ಕೂಡಲೇ ಚುನಾವಣೆ ನಡೆಸುವಂತೆ ಸೂಚನೆ ನೀಡಿತ್ತು. ಇದರ ಪರಿಣಾಮವಾಗಿ ಗ್ರಾಪಂಗಳಿಗೆ ಕಳೆದ ವರ್ಷ ಚುನಾವಣೆ ನಡೆಯಿತು.
ಈಗ ಜಿಪಂ, ತಾಪಂ.ಗಳಿಗೆ ಇನ್ನೂ ಚುನಾವಣೆ ನಡೆದಿಲ್ಲ. ಆದರೆ, ಆಯೋಗ ಮಾತ್ರ ಎಂಎಲ್ಸಿ ಚುನಾವಣೆ ಘೋಷಿಸಿದೆ.
ಈ ಕುರಿತು ಮಾಜಿ ಶಾಸಕ ಮತ್ತು ಪಂಚಾಯತ್ ರಾಜ್ ಬಗ್ಗೆ ಸಾಕಷ್ಟು ಅನುಭವ ಹೊಂದಿರುವ ರಾಜಕಾರಣಿ ಡಿ. ಆರ್. ಪಾಟೀಲರೊಂದಿಗೆ ʼಪ್ರತಿಧ್ವನಿʼಯೊಂದಿಗೆ ಮಾತನಾಡಿದ್ದು, ʼಏಕೆ ಚುನಾವಣೆ ನಡಡೆಸಿಲ್ಲ ಎಂದು ನಾವು ಪ್ರಶ್ನಿಸಬಹುದು. ಆದರೆ ಏಕೆ ಚುನಾವಣೆ ನಡೆಸುತ್ತಿದ್ದೀರಿ ಎಂದು ಕೇಳುವುದು ಕಷ್ಟ. ಚುನಾವಣಾ ನಿಯಮಗಳ ಪ್ರಕಾರ ಖಾಲಿಯಾದ ಸ್ಥಾನಗಳಿಗೆ ಚುನಾವಣಾ ನಡೆಸುವ ಅಧಿಕಾರ ಆಯೋಗಕ್ಕ ಇದೆʼ ಎಂದು ವಿವರಿಸಿದ್ದಾರೆ.
ʼಆದರೆ ಶೇ. 25-30 ಮತದಾರರನ್ನು ಹೊರಗಿಟ್ಟು ಚುನಾವಣೆ ನಡೆಸುವುದು ತಪ್ಪಲ್ಲವೇ?ʼ ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಿದ ಡಿ. ಆರ್. ಪಾಟೀಲ್. ʼಕೆಲವೊಮ್ಮೆ ಅದು ಅನಿವಾರ್ಯ ಆಗಬಹುದು. ಆದರೆ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ನ್ಯಾಯಾಲಯ ಕೂಡ ಈ ಆಕ್ಷೇಪವನ್ನು ಸಮರ್ಥಿಸಿ ಆಯೋಗಕ್ಕೆ ಸೂಚನೆ ನೀಡಬಹುದುʼ ಎಂದರು.
ರಾಜಕೀಯ ಚಿಂತಕ, ಪ್ರೊ. ಮುಜಾಫರ್ ಅಸ್ಸಾದಿ ʼಪ್ರತಿಧ್ವನಿʼಗೆ ಪ್ರತಿಕ್ರಿಯೆ ನೀಡಿದ್ದು, ʼಆಡಳಿತಾತ್ಮಕವಾಗಿ ಚುನಾವಣಾ ಆಯೋಗದ ಕ್ರಮ ಸರಿ ಇರಬಹುದು. ಆದರೆ ಶೇ. 25ರಷ್ಟು ಮತದಾರರನ್ನು ಮತದಾನದ ಪ್ರಕ್ರಿಯೆಯಿಂದ ಹೊರಗಿಡುವುದನ್ನು ಖಂಡಿತ ಆಕ್ಷೇಪಿಸಲೇಬೇಕುʼ ಎಂದರು.
ʼಪ್ರತಿಧ್ವನಿʼ ಜೊತೆ ಮಾತನಾಡಿದ ಹೈಕೋರ್ಟ್ ವಕೀಲೆ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, ʼಚುನಾವಣಾ ಆಯೋಗ ಆತುರದ ಕ್ರಮ ಕೈಗೊಳ್ಳುವ ಅಗತ್ಯ ಇರಲಿಲ್ಲ. ಜಿಪಂ, ತಾಪಂ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಲ್ಲದೇ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಸಂದರ್ಭದಲ್ಲಿ ಈ ಸಂಸ್ಥೆಗಳ ಚುನಾವಣೆಗೆ ಅಡೆತಡೆಯಾಗಿರುವ ಅಂಶಗಳನ್ನು ನಿವಾರಿಸಿ ಚುನಾವಣೆ ನಡೆಸುವ ಬಗ್ಗೆ ಆಯೋಗ ಕ್ರಮ ಕೈಗೊಳ್ಳಬೇಕಿತ್ತುʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Also Read : ವಿಧಾನ ಪರಿಷತ್ ಚುನಾವಣೆ ; ಒಂದು ಲಕ್ಷ ಮತದಾರರಿಂದ ಹಕ್ಕು ಚಲಾವಣೆ!
ಒಟ್ಟಿನಲ್ಲಿ 25 ಎಂಎಲ್ಸಿ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ನಿಗದಿ ಮಾಡಿರುವುದು ಆಕ್ಷೇpಪಣೆಗೆ ಕಾರಣವಾಗಿದೆ. ಯಾರಾದರೂ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನೆ ಮಾಡಿದರೆ ಆಯೋಗ ವಿವರಣೆ ನೀಡಬೇಕಾಗುತ್ತದೆ.