ಬೆಂಗಳೂರಿನ ನಗರ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ಬಂಧನದ ವಾರಂಟ್ ರದ್ದುಪಡಿಸುವಂತೆ ಕೋರಲಾದ ಮನವಿ ಮೇಲಿನ ಆದೇಶವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರಕ್ಕೆ ಕಾಯ್ದಿರಿಸಿದೆ.
ವಿಶ್ವನಾಥ್ ವಿರುದ್ಧ ಆರ್ ಟಿ ನಗರದ ಎ ಮೋಹನ್ ಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಜೆ ಪ್ರೀತ್ ಪೀಠ ಸೋಮವಾರ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ವಿಶ್ವನಾಥ್ ಪರ ಹಾಜರಾಗಿದ್ದ ವಕೀಲ ಶತಭಿಷ್ ಶಿವಣ್ಣ ಮೆಮೊ ಸಲ್ಲಿಸಿ, ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 70 (2)ರ ಅನುಸಾರ ಆರೋಪಿಯ ಗೈರು ಹಾಜರಿಯಲ್ಲಿ ವಾರಂಟ್ ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಮೆಮೊ ಪರಿಶೀಲಿಸಿದ ನ್ಯಾಯಾಧೀಶರು ಈ ಕುರಿತ ಆದೇಶ ಕಾಯ್ದಿರಿಸಿದರು.
ಮೋಹನ್ ಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಗರಣದ ಹಿಂದಿನ ರೂವಾರಿ. ದೊಡ್ಡ ಕಡತಗಳಿಗೆ ಅನುಮೋದನೆ ದೊರಕಿಸಿಕೊಡುವಲ್ಲಿ ಮೋಹನ್ ಅವರು ಮಹತ್ವದ ಪಾತ್ರವಹಿಸುತ್ತಿದ್ದಾರೆ. ಇದಕ್ಕಾಗಿ ಅಪಾರ ಪ್ರಮಾಣದಲ್ಲಿ Saha ಪಡೆಯುತ್ತಿದ್ದಾರೆ. ಇವರು ಬಿಡಿಎ ಕಿಂಗ್ಪಿನ್ ಎಂದು ಸುದ್ದಿವಾಹಿನಿಯೊಂದರಲ್ಲಿ ಶಾಸಕ ವಿಶ್ವನಾಥ್ ಸಾಲು ಸಾಲು ಆರೋಪ ಮಾಡಿದ್ದರು.
ಶಾಸಕ ವಿಶ್ವನಾಥ್ ಅವರಿಂದ ತಮ್ಮ ಘನತೆಗೆ ಕುಂದುಂಟಾಗಿದೆ ಎಂದು ವಿಶ್ವನಾಥ್ ವಿರುದ್ಧ ಮೋಹನ್ ಕುಮಾರ್ ಮಾನನಷ್ಟ ದಾವೆ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಭಂದ ಬಂಧನ ವಾರೆಂಟ್ ಜಾರಿಯಾಗಿತ್ತು, ಅದನ್ನು ರದ್ದು ಪಡಿಸುವಂತೆ ಕೋರಿದ ಅರ್ಜಿಯ ಆದೇಶವನ್ನೇ ಈಗ ಕೋರ್ಟ್ ಕಾಯ್ದಿರಿಸಿದೆ.