ಬೆಂಗಳೂರು : ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ರನ್ನ ಪೊಲೀಸರು ಬಂಧಿಸಿದ್ದಾರೆ. 2010ರಲ್ಲಿ ನಡೆದಿದ್ದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರವಾರ ಶಾಸಕ ಸತೀಶ್ ಸೈಲ್ ತಪ್ಪಿತಸ್ಥರು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ನೀಡಿದೆ.

ಈ ಬೆನ್ನಲ್ಲೇ ಸಿಬಿಐ ಶಾಸಕ ಸತೀಶ್ ಸೈಲ್ ರನ್ನ ಬಂಧಿಸಿದೆ. ಗುರುವಾರ ನ್ಯಾಯಾಲಯ ಆದೇಶ ನೀಡುತ್ತಿದ್ದಂತೆ ಶಾಸಕ ಸತೀಶ್ ಸೈಲ್ ಬಂಧನವಾಗಿದ್ದು, ಮೆಡಿಕಲ್ ಟೆಸ್ಟ್ ಬಳಿಕ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ಇನ್ನು ಸದ್ಯಕ್ಕೆ ಸತೀಶ್ ಸೈಲ್ ಅವರನ್ನು ಅಪರಾಧಿ ಎಂದು ಆದೇಶ ನೀಡಿರುವ ಜನಪ್ರತಿನಿಧಿಗಳ ಕೋರ್ಟ್, ಶಿಕ್ಷೆ ಪ್ರಮಾಣವನ್ನು ಅ.25ಕ್ಕೆ ಕಾಯ್ದಿರಿಸಿದೆ. ಅದರಂತೆ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಿರುವ ಸಿಬಿಐ ತಂಡ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನ್ಯಾಯಾಲಯದ ಎದುರು ಹಾಜರುಪಡಿಸಲಿದೆ.