
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿ ಕೈಗಾರಿಕೆಗಳಿಗಾಗಿ 1,000 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ಹಂತದ ಅಧಿಸೂಚನೆ ಆಗಿದ್ದು, ತ್ವರಿತಗತಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಈ ಮೂಲಕ ಆಧುನಿಕ ಕೈಗಾರಿಕೆಗಳು ಇಲ್ಲಿಗೆ ಬರಲು ಅನುವು ಮಾಡಿಕೊಡಬೇಕು ಎಂದು ಅಲ್ಲಿನ ಶಾಸಕ ಶರತ್ ಬಚ್ಚೇಗೌಡ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮಂಗಳವಾರ ಅವರು ಖನಿಜ ಭವನದಲ್ಲಿ ಈ ಸಂಬಂಧ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವರೊಂದಿಗೆ ಮಾತನಾಡಿದ ಶಾಸಕರು, ಹೊಸಕೋಟೆಯು ಬೆಂಗಳೂರಿಗೆ ಸಮೀಪದಲ್ಲಿದ್ದು, ಕೈಗಾರಿಕೆಗಳ ಬೆಳವಣಿಗೆಗೆ ಸೂಕ್ತವಾಗಿದೆ. ಜಾಗತಿಕ ಮಟ್ಟದ ಹತ್ತಾರು ಕಂಪನಿಗಳು ಇಲ್ಲಿ ತಮ್ಮ ಡೇಟಾ ಸೆಂಟರ್ ಗಳನ್ನು ಆರಂಭಿಸಲು ಆಸಕ್ತಿ ಹೊಂದಿವೆ. ಇದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ಸದ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾಥಮಿಕ ಹಂತದಲ್ಲಿ ನಿಂತಿದೆ. ಇದನ್ನು ತ್ವರಿತವಾಗಿ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿ, ಅಂತಿಮ ಅಧಿಸೂಚನೆ ಹೊರಡಿಸಬೇಕು. ಹಲವು ಕಂಪನಿಗಳು ಈ ಭಾಗದಲ್ಲಿ ಭೂಮಿ ಬೇಕೆಂದು ಕೇಳುತ್ತಿವೆ ಎಂದು ವಿವರಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ಸಚಿವರು, `ಹೊಸಕೋಟೆ ತಾಲ್ಲೂಕಿನ ಶಾಸಕರು ಗಮನಕ್ಕೆ ತಂದಿರುವ ವಿಚಾರಕ್ಕೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗುವುದು. ನಂದಗುಡಿಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಸ್ವೀಡಿಷ್ ಕೈಗಾರಿಕಾ ಪಾರ್ಕ್ ಮತ್ತು ತೈವಾನ್ ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಉದ್ದೇಶ ಸರಕಾರದ್ದಾಗಿದೆ. ಇದು ಸಾಧ್ಯವಾದರೆ, ಹೊಸಕೋಟೆ ಸುತ್ತಮುತ್ತಲಿನ ಯುವಜನರಿಗೂ ಉದ್ಯೋಗ ಸಿಗಲಿದ್ದು, ಆರ್ಥಿಕ ಅಭಿವೃದ್ಧಿಗೆ ವೇಗ ದೊರೆಯಲಿದೆ’ ಎಂದಿದ್ದಾರೆ.







