ಮೈಸೂರಿನಲ್ಲಿ ಅಡುಗೆ ಅನಿಲ ಕೊಳವೆ ಮಾರ್ಗ ಅಳವಡಿಸೋ ವಿಚಾರದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕರಾದ ನಾಗೇಂದ್ರ ಮತ್ತೊರ್ವ ಶಾಸಕ ರಾಮ್ದಾಸ್ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ.ಇದು ಜಿಲ್ಲೆಯ ಬಿಜೆಪಿಯ ಸಂಸದರು ಮತ್ತು ಶಾಸಕರ ನಡುವೆ ಬಿರುಕು ಸೃಷ್ಟಿಸಿದೆ. ಮೈಸೂರು ಅಭಿವೃದ್ಧಿಪಡಿಸಿದವರಲ್ಲಿ ಮಹಾರಾಜರು ಬಿಟ್ರೆ ನಾನೇ ಎಂದಿದ್ದ ಪ್ರತಾಪ್ ಸಿಂಹಗೆ ನಾಗೇಂದ್ರ ತಿರುಗೇಟು ಕೊಟ್ಟಿದ್ದಾರೆ.
ಮೈಸೂರು ಮಹಾರಾಜರು ತಮ್ಮ ಮನೆಯ ಒಡವೆ ಮಾರಿ, KRS ಅಣೆಕಟ್ಟು ಕಟ್ಟಿಸಿದ್ರು. ಈಗ ನಾನು ಮಾಡಿದ್ದು ಅಂತ ಹೇಳಿಕೊಳ್ಳೋ ಯಾವ ನಾಯಕರು ಆ ರೀತಿ ತಮ್ಮ ಒಡವೆ ಮಾರಿ ರಾಜ್ಯಕ್ಕೆ ಕೆಲಸ ಮಾಡಿದ್ದಾರೆ? ಸುಮ್ಮನೆ ರಾಜರಿಗೆ ಹೋಲಿಸಿಕೊಳ್ಳಕ್ಕೆ ಆಗಲ್ಲ ಅಂತ ಪ್ರತಾಪ್ ಸಿಂಹನಿಗೆ ತಿರುಗೇಟು ನೀಡಿದ್ದಾರೆ.
ಕೊಳವೆ ಮಾರ್ಗವಾಗಿ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲ (LPG) ಪೂರೈಸುವ ಬಹುನಿರೀಕ್ಷಿತ ಯೋಜನೆಯನ್ನು ಭಾರತೀಯ ಅನಿಲ ಪ್ರಾಧಿಕಾರ ಕೈಗೆತ್ತಿಕೊಂಡಿದ್ದು, ದೇಶದ ಹಲವು ನಗರಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದೆ. ಈ ಯೋಜನೆ ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮಂಡ್ಯ, ತುಮಕೂರು, ಹಾಸನ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಹೂವಿನ ಹಡಗಲಿ, ಹಾವೇರಿ, ಕೋಲಾರ, ಬೆಳಗಾವಿ, ಗದಗ, ಗಂಗಾವತಿ, ಕಲಬುರ್ಗಿ, ಚಿತ್ರದುರ್ಗ ನಗರಗಳು ಆಯ್ಕೆಯಾಗಿವೆ. ಈಗಾಗಲೇ ಬೆಂಗಳೂರಿನ ಹಲವೆಡೆ ಕಾರ್ಯರೂಪಕ್ಕೆ ಬಂದಿದೆ.
ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿನ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮನೆಗಳಿಗೆ ಕೊಳವೆ ಮೂಲಕ ಅನಿಲ ಸಂಪರ್ಕ ಕಲ್ಪಿಸಲು AG and P Pratham ಕಂಪನಿಯು ವಹಿಸಿಕೊಂಡಿದೆ. ಈ ಕುರಿತು 2021 ರಲ್ಲಿ ಪ್ರತಾಪ್ ಸಿಂಹ ಕಂಪನಿಗಳ ಜೊತೆ ಮಾತುಕತೆಯಾಡಿದ್ದರು.
ಮೊದಲ ಹಂತದಲ್ಲಿ ಮೈಸೂರು ನಗರದ 40 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಮುಂದಿನ 8 ವರ್ಷಗಳಲ್ಲಿ 3 ಜಿಲ್ಲೆಗಳ 5 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಹೇಳಿಕೊಂಡಿದೆ.