ನಂಜನಗೂಡು :ನಂಜನಗೂಡಿನ ನಗರಸಭೆಯಲ್ಲಿ ಶಾಸಕ ದರ್ಶನ್ ದೃವನಾರಾಯಣ್ ಅವರ ಮೊದಲ ಸಭೆ.
ಶಾಸಕರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ನಗರ ಸಭೆಯ ಸಭೆ ಇಂದು ನಡೆಯಿತು.
ಸಭೆಯಲ್ಲಿ ನಗರಸಭಾ ಸದಸ್ಯರು ನಗರ ಸಭೆಯಲ್ಲಿ ನಡೆಯುತ್ತಿರುವ ಕಾರ್ಯವೈಖರಿ, ಅಧಿಕಾರಿಗಳ ಬೇಜವಾಬ್ದಾರಿತನ, ಭ್ರಷ್ಟಾಚಾರ, ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿ ಶಾಸಕರ ಗಮನಕ್ಕೆ ತಂದರು.
ಸದಸ್ಯರ ಅಹವಾಲನ್ನು ಗಮನಿಸಿದ ಶಾಸಕರು ಅಧಿಕಾರಿಗಳು ಮುಂದೆ ಈ ರೀತಿ ಆಗದಂತೆ ಕಚೇರಿಯ ಕೆಲಸದ ಜೊತೆಗೆ ಎಲ್ಲಾ ವಾರ್ಡ್ ಗಳಿಗೂ ಸದಸ್ಯರ ಜೊತೆ ತೆರಳಿ, ಅಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಬಳಿಕ ನಾನು ನಗರಸಭಾ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರು ನಗರಸಭೆ ವಿರುದ್ಧ ಕೆಲಸದ ವಿಳಂಬ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಹಾಗಾಗಿ ಇನ್ನು ಮುಂದೆ ಇದಕ್ಕೆ ಆಸ್ಪದ ನೀಡದಂತೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂಜನಗೂಡು ನಗರ ಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹಾಗು ಹಲವು ಭ್ರಷ್ಟಾಚಾರಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾಸಕರು ಇದು ಮೊದಲನೇ ಸಭೆಯಾಗಿದ್ದು, ಇದರ ಬಗ್ಗೆ ಸರಿಯಾದ ದಾಖಲೆಗಳನ್ನು ಪಡೆದು ಪರಿಶೀಲಿಸಿ ನಂತರ ತಿಳಿಸುವುದಾಗಿ ಹೇಳಿದರು.
ಸಭೆಯಲ್ಲಿ ಆಯುಕ್ತ ನಂಜುಂಡಸ್ವಾಮಿ, ಎ ಇ ಇ ಶ್ರೀನಿವಾಸ್ ಸೇರಿದಂತೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕುರಹಟ್ಟಿ ಮಹೇಶ್, ಶಂಕರ್, ನಗರಸಭಾ ಸದಸ್ಯರುಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು