ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರನ್ನು ಫೆಬ್ರವರಿ 21ರವರೆಗೆ ಸಿಐಡಿ ಕಸ್ಟಡಿಗೆ ನೀಡುವಂತೆ 42ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ಬಂಧನದ ಬಳಿಕ ಆರೋಗ್ಯ ತಪಾಸಣೆಗಾಗಿ ಶಾಸಕರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೃದಯ ಸಂಬಂಧಿ ಸಮಸ್ಯೆ ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಯಿತು.

ಸಿಐಡಿ ಪರ ಎಸ್ಪಿಪಿ ಅಶೋಕ್ ನಾಯ್ಕ್ ಹಾಜರಿದ್ದರು. ವೈದ್ಯರ ವರದಿ ಪ್ರಕಾರ ಬೈರತಿ ಬಸವರಾಜ್ ಅವರ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ. ಬಳಿಕ ನ್ಯಾಯಾಧೀಶ ಶಿವಕುಮಾರ್ ಅವರ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರಿಸಿದೆ.

ಬಿಜೆಪಿ ನಾಯಕರ ಭೇಟಿ
ಈ ನಡುವೆ ಬಿಜೆಪಿ ನಾಯಕರ ತಂಡ ಬೈರತಿ ಬಸವರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ʼಇದು ನಮಗೆ ಪರೀಕ್ಷೆಯ ಸಮಯ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಗೊತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪಕ್ಷ ಮತ್ತು ಯಡಿಯೂರಪ್ಪ ಅವರ ಜೊತೆ ಇದ್ದೇ ಇರುತ್ತೇವೆʼ ಎಂದು ಹೇಳಿದ್ದಾರೆ.







