ಮ್ಯಾಡ್ರಿಡ್ ; ನೇರಪ್ರಸಾರದಲ್ಲಿ ವರದಿ ಮಹಿಳಾ ವರದಿಗಾರ್ತಿ ವರದಿ ಮಾಡುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ, ಆಕೆಯ ಖಾಸಗಿ ಅಂಗವನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಈ ಘಟನೆ ಸ್ಪೇನ್ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

ಪತ್ರಕರ್ತೆ ಇಸಾ ಬಲ್ಲಾಡೋ ಈ ಕಿರುಕುಳಕ್ಕೆ ಒಳಗಾಗಿದ್ದು, ಅವರು ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಲ್ಲಿ ನಡೆದ ದರೋಡೆಯ ಬಗ್ಗೆ ನೇರ ಪ್ರಸಾರದಲ್ಲಿ ವಿಸ್ತೃತ ವರದಿಯನ್ನು ಮಾಡುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿ ಒಬ್ಬ ಆಕೆಯನ್ನ ಅನುಚಿತವಾಗಿ ಸ್ಪರ್ಶಿಸಿ, ಮಾತನಾಡಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಇಸಾ ಮುಜುಗರಕ್ಕೆ ಒಳಗಾಗುತ್ತಾರೆ. ಬಳಿಕ ಇಸಾ ಅವರು ಯಾವ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಅಪರಿಚಿತ ವ್ಯಕ್ತಿ ಪ್ರಯತ್ನಿಸುತ್ತಾನೆ. ಇದಕ್ಕೆ ಪ್ರತಿಕ್ರಿಯಿಸುವ ಪತ್ರಕರ್ತೆ ಇಸಾ, ನಾನು ಯಾವ ಟಿವಿ ಸ್ಟೇಷನ್ ಎಂದು ತಿಳಿದುಕೊಳ್ಳಲು ಬಯಸುತ್ತೀರಾ, ಹಾಗಿದ್ದರೆ ನೀವು ನಿಜವಾಗಿಯೂ ನನ್ನನ್ನು ಮುಟ್ಟಬೇಕೆ? ಎಂದು ಸಿಟ್ಟಿನಿಂದಲೇ ಹೇಳುತ್ತಾ ನಾನು ಲೈವ್ ರಿಪೋರ್ಟ್ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ

ಇದೇ ವೇಳೆ ಸ್ಟುಡಿಯೋದಿಂದ ವಿಡಿಯೋ ವೀಕ್ಷಣೆ ಮಾಡುತ್ತಿದ್ದ ನಿರೂಪಕ ಮಧ್ಯಪ್ರವೇಶಿಸಿ, ಆತ ನಿಮ್ಮನ್ನು ಸ್ಪರ್ಶಿಸಿದನೇ? ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸಿದ ಇಸಾ, ಬೇಸರದಿಂದ ಆತ ಸ್ಪರ್ಷಿಸಿದ ಎನ್ನುತ್ತಾರೆ. ಇದರಿಂದ ಆಕ್ರೋಶಗೊಳ್ಳುವ ನಿರೂಪಕ ಆತನನ್ನು ಕ್ಯಾಮೆರಾ ಮುಂದೆ ಬರುವಂತೆ ಹೇಳುತ್ತಾರೆ. ಈ ವೇಳೆ ಆತ ನಾನೇನು ತಪ್ಪು ಮಾಡಿಲ್ಲ ಎಂದು ಮತ್ತೆ ಹೇಳುತ್ತಾನೆ

ಬಳಿಕ ವರದಿಗಾರ್ತಿ ನೀಡಿದ ದೂರಿನ ಆಧಾರದ ಮೇಲೆ ಸ್ಪೇನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.