ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಗುರುಹಿರಿಯರಿಂದ ಬಂದಂತಹ ಉಡುಗೊರೆ. ಪ್ರತಿನಿತ್ಯ ಯೋಗಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಡಲು ಸಹಕಾರಿಯಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ ಪಿವೈಎಸ್ ಎಸ್) ವತಿಯಿಂದ ಹಮ್ಮಿಕೊಂಡಿದ್ದ ಯೋಗ ಚಾರಣ ಮತ್ತು ದುರ್ಗನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಯೋಗ ದಸರಾ ಸೇರಿದಂತೆ ಬಹುತೇಕ ಎಲ್ಲಾ ದಸರಾ ಕಾರ್ಯಕ್ರಮಗಳನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಸಾವಿರ ಮೆಟ್ಟಿಲು ಹತ್ತಿ ಬಂದು ಯೋಗ ಮಾಡಿದ್ದಾರೆ. ಸೆ.26ರಿಂದ ಅ.3ರವರೆಗೆ ನಿತ್ಯ ಯೋಗಾಸನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ದಸರಾ ಕಳೆಕಟ್ಟಿದೆ. ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಎಲ್ಲಾ ಅಚ್ಚುಕಟ್ಟಾಗಿ ಮಾಡಲಾಗಿದ್ದು, ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬಹುತೇಕ ಕಾರ್ಯಕ್ರಮಗಳು ಇಂದು ಅಂತ್ಯವಾಗಲಿದೆ. ನಾಳೆ ಮೆರವಣಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳು ಸಹ ನಾಳೆ ಸಂಜೆ ಆಗಮಿಸಲಿದ್ದಾರೆ. ಎರಡು ವರ್ಷ ಕೋವಿಡ್‌ನಿಂದ ಅದ್ದೂರಿ ದಸರಾ ಮಾಡಿರಲಿಲ್ಲ. ಉನ್ನತ ಮಟ್ಟದ ಸಮಿತಿ ತೀರ್ಮಾನದಂತೆ ಆಚರಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಕೂಡ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ .












