ಬೆಂಗಳೂರು: ಸರ್ಕಾರದ ಸವಲತ್ತುಗಳನ್ನು ತ್ವರಿತವಾಗಿ ಮತ್ತು ನೇರವಾಗಿ ತಲುಪಿಸಲು ಸಾಧ್ಯವಾಗುವಂತೆ ವಿಶೇಷಚೇತನರಿಗಾಗಿಯೇ ಒಂದು ಪ್ರತ್ಯೇಕ ನಿಗಮ ಅಥವಾ ಮಂಡಳಿಯ ಸ್ಥಾಪನೆಯ ಅಗತ್ಯವಿದೆ ಎಂದು ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.

ಈ ವಿಷಯದ ಸಂಬಂಧ ಶುಕ್ರವಾರ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿರುವ ಸಚಿವರು, ಸದ್ಯ ವಿಶೇಷಚೇತನರ ಇಲಾಖೆಯು ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರನ್ನು ಒಳಗೊಂಡ ಇಲಾಖೆಯಲ್ಲಿ ಇರುವುದರಿಂದ, ಈ ಇಲಾಖೆಯು ಬಹಳ ದೊಡ್ಡ ಇಲಾಖೆಯಾಗಿರುವುದರಿಂದ ತ್ವರಿತಗತಿಯಲ್ಲಿ ವಿಶೇಷಚೇತರ ಹಕ್ಕುಗಳ ಜಾರಿ ಸೂಕ್ತ ಕಾಲದಲ್ಲಿ ತಲುಪಿಸಲು ತೊಂದರೆಯಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮುಂದುವರಿದು, ಸರ್ಕಾರವು ವಿಶೇಷಚೇತನರಿಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡಿದ್ದರೂ ಆ ಹಕ್ಕುಗಳಿಗೆ ತಕ್ಕಂತೆ ಸೇವೆ ಒದಗಿಸಲು ವಿಳಂಭವಾಗುತ್ತಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿ ಮತ್ತು ವಿಸ್ತಾರವೂ ಮತ್ತೊಂದು ಕಾರಣವಿರಬಹುದೆಂದು ಭಾವಿಸಬಹುದಾಗಿದೆ ಎಂದಿರುವ ಸಚಿವರು, ಒಂದು ಪ್ರತ್ಯೇಕ ನಿಗಮ ಅಥವಾ ಮಂಡಳಿಯನ್ನು ಸ್ಥಾಪಿಸಿದರೆ ಸವಲತ್ತುಗಳನ್ನು ನೇರವಾಗಿ ಮತ್ತು ತ್ವರಿತವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಕೋರಿದ್ದಾರೆ.












