ಸುಳ್ಯ ( ದಕ್ಷಿಣ ಕನ್ನಡ) : ಬಿಜೆಪಿಯಿಂದ ಟಿಕೆಟ್ ಮಿಸ್ ಆದ ಬಳಿಕ ಅಸಮಾಧಾನಗೊಂಡ ಹಿರಿಯ ನಾಯಕರ ಪೈಕಿ ಒಬ್ಬರಾದ ಸಚಿವ ಎಸ್. ಅಂಗಾರ ಬಂಡಾಯ ಶಮನಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಮಿಸ್ ಆದ ಬಳಿಕ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು ಮಾತ್ರವಲ್ಲದೇ ಹಾಲಿ ಅಭ್ಯರ್ಥಿಯ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಸಚಿವ ಎಸ್. ಅಂಗಾರ ಇದೀಗ ತಮ್ಮ ನಿಲುವು ಬದಲಿಸಿದ್ದಾರೆ.

ಈ ವಿಚಾರವಾಗಿ ಇಂದು ಮಾತನಾಡಿದ ಸಚಿವ ಅಂಗಾರ, ನಾನು ನೋವಿನಿಂದ ರಾಜಕೀಯ ನಿವೃತ್ತಿಯ ಮಾತನಾಡಿದ್ದೆ. ಆದರೆ ನಾನೀಗ ಮೊದಲಿನಂತೆಯೇ ಪಕ್ಷದಲ್ಲಿ ಸಕ್ರಿಯವಾಗಿದ್ದು ಭಾಗಿರಥಿ ಮುರುಳ್ಯ ಗೆಲುವೊಂದೇ ನಮ್ಮ ಮುಂದಿನ ನಡೆಯಾಗಿದೆ. ನಾನು ವೈಯಕ್ತಿಕವಾಗಿ ನಿಡಿದ್ದ ಹೇಳಿಕೆ ವಾಪಸ್ ಪಡೆಯುತ್ತಿದ್ದೇನೆ ಎಂದಿದ್ದಾರೆ.
ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಯ ಪರ ನನಗೆ ಯಾವುದೇ ಬೇಸರವಿಲ್ಲ. ನನ್ನಲ್ಲಿ ಯಾವುದೇ ಅಸಮಾಧಾನ ಹಾಗೂ ಭಿನ್ನಾಭಿಪ್ರಾಯವಿಲ್ಲ. ಅಂದು ನಾನು ದುಃಖ ಹಾಗೂ ಉದ್ವೇಗದಲ್ಲಿ ಆ ಹೇಳಿಕೆಯನ್ನು ನೀಡಿದ್ದೆ. ಆದರೆ ಇಂದು ನಾನು ಆ ಹೇಳಿಕೆಗಳನ್ನು ಹಿಂಪಡೆಯುತ್ತಿದ್ದೇನೆ ಎಂದು ಅಂಗಾರ ಹೇಳಿದರು .