
— ಬಿ. ಶ್ರೀಪಾದ ಭಟ್
ಎನ್ ಸಿಎಫ್ 2005 (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು) ರಚನೆ
ಸಂದರ್ಭದಲ್ಲಿ ನಾನು ಅದರ ವ್ಯಾಸಂಗ ಕ್ರಮ (ಪೆಡಗಾಜಿ) ಸಮಿತಿಯ ಭಾಗವಾಗಿದ್ದೆ.
ಆಗ ಮಿಕ್ಕ ವಿಚಾರಗಳ ಜೊತೆಗೆ ಮುಖ್ಯವಾಗಿ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ (CCE) ಕುರಿತು ಹೆಚ್ಚಿನ ಆದ್ಯತೆ ನೀಡಲಾಗಿತ್ತು.
CCE ಮೂಲಕ ‘ಕೇವಲ ಪರೀಕ್ಷೆ-ಕೇಂದ್ರಿತ ವ್ಯವಸ್ಥೆಯಿಂದ ಹೊರಬಂದು ಮಕ್ಕಳ ಕಲಿಕೆ-ಕೇಂದ್ರಿತ ಮೌಲ್ಯಮಾಪನ ಪ್ರಕ್ರಿಯೆಯತ್ತ ಪರಿವರ್ತನೆಯಾಗಬೇಕೆಂದು’ ನಿರ್ಧರಿಸಲಾಯಿತು.
ಇದು ಜ್ಞಾನ , ಮಾನಸಿಕ, ಭಾವನಾತ್ಮಕ ವಲಯಗಳನ್ನು ಒಳಗೊಂಡಂತೆ
ಮಕ್ಕಳ ಕಲಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿತ್ತು.
ಕೇವಲ ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಮೌಲ್ಯಮಾಪನಕ್ಕೆ ಸೀಮಿತವಾಗಿರದೆ ನಿರಂತರತೆ ಕಡೆ ಗಮನ ಹರಿಸಲಾಗಿತ್ತು.
ನಿರಂತರ:
CCE ಯು ಶೈಕ್ಷಣಿಕ ವರ್ಷದ ಪ್ರತಿ ತಿಂಗಳು ನಿರಂತರವಾಗಿ ಮೌಲ್ಯಮಾಪನವನ್ನು ಒಳಗೊಂಡಿದೆ.
ಕೇವಲ ಅಂತಿಮ ಫಲಿತಾಂಶ (ಗ್ರೇಡ್‌ಗಳು) ಮೇಲೆ ಕೇಂದ್ರೀಕರಿಸದೆ ಕಲಿಕೆಯ ಪ್ರಕ್ರಿಯೆಗೆ ಮತ್ತು ಕೌಶಲ್ಯಗಳ ಬೆಳವಣಿಗೆಗೆ ಒತ್ತು ನೀಡುತ್ತದೆ.
ಇದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನಿಯಮಿತವಾಗಿ ಪರಸ್ಪರ ಸಮಾಲೋಚನೆ, ಸಂವಾದಕ್ಕೆ ಅವಕಾಶ ಒದಗಿಸುತ್ತದೆ.
ಕಲಿಕೆಯ ಬಹುಮುಖ್ಯ ಅಂಶಗಳ ಮೇಲೆ ಗಮನಹರಿಸುವ ಮೂಲಕ, CCE ಯು ಪರೀಕ್ಷೆಗಳಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಸಮಗ್ರ:
ಇದು ಕೇವಲ ಶೈಕ್ಷಣಿಕ ಸಾಧನೆ ಮತ್ತು ಫಲಿತಾಂಶದ ಪರ್ಸೆಂಟೇಜ್ ಗೆ ಸೀಮಿತವಾಗದೆ ವಿವಿಧ ಕೌಶಲ್ಯಗಳು, ಜ್ಞಾನಶಾಖೆಗಳ ಕಲಿಕೆ ಮತ್ತು ಮಾನಸಿಕ ಸಿದ್ಧತೆಯನ್ನು ಮೌಲ್ಯಮಾಪನ ಮಾಡುತ್ತದೆ.

ಇಲ್ಲಿ ಮೌಲ್ಯ ಮಾಪನ ಎಂದರೆ ಪರೀಕ್ಷೆಯಲ್ಲ, ಅಂಕಗಳಲ್ಲ. ಬದಲಿಗೆ ಮಕ್ಕಳ ಕಲಿಕೆಯನ್ನು ಅರಿತುಕೊಳ್ಳುವುದು…
ಎನ್ ಸಿಎಫ್ 2005 ರಚನೆಯಾಗಿ ಇಪ್ಪತ್ತು ವರ್ಷಗಳಾದರೂ ಸಹ ಅದರ ಪಠ್ಯಕ್ರಮವನ್ನು ಸಮಗ್ರವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕಾಲು ಭಾಗ ಮಾತ್ರ ಕ್ರಮಿಸಲಾಗಿತ್ತು.
ಆದರೆ ಎನ್‌ಇಪಿ 2020 ನಂತರ ಎನ್ ಸಿಎಫ್ 2005 ರದ್ದುಗೊಳಿಸಲಾಯಿತು.
ಈಗ ಮತ್ತೆ ಇದನ್ನು ಪ್ರಸ್ತಾಪಿಸುವ ಕಾರಣವೇನೆಂದರೆ
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ LBA(lessons based assessment) ಅಡಿಯಲ್ಲಿ ನಡೆಯಬೇಕಾದ ಪರೀಕ್ಷೆ ಮತ್ತು ಮೌಲ್ಯ ಮಾಪನ ಹಾಗೂ SATS(students achievement tracking system) ದಾಖಲೆಯ ವೇಳಾಪಟ್ಟಿ(time table) ಪ್ರಕಟಿಸಿದೆ. (ಇದರ ಪ್ರತಿಯನ್ನು ಲಗತ್ತಿಸಿದ್ದೇನೆ)

ಇದರ ಪ್ರಕಾರ ಮಕ್ಕಳು 60 ದಿನಗಳಲ್ಲಿ 55-58 ಪರೀಕ್ಷೆಗಳನ್ನು ಬರೆಯುತ್ತಾರೆ.
ಇದರ ಜೊತೆಗೆ ಶಿಕ್ಷಕರ ಮೌಲ್ಯಮಾಪನದ ವಿವರಗಳು, ಇತರೇ ವೆಚ್ಚಗಳ ವಿವರಗಳು ಈ ಪ್ರತಿಯಲ್ಲಿದೆ.
ಅಂದರೆ ನಮ್ಮ ಶಿಕ್ಷಣ ಇಲಾಖೆಯ ಕೃಪೆಯಿಂದ ಮಕ್ಕಳು ವರ್ಷವಿಡೀ ಪರೀಕ್ಷೆ ಬರೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಇಲ್ಲಿ ಕಲಿಕೆಯ ಮೌಲ್ಯ ಮಾಪನ ಎಂದರೆ ಪರೀಕ್ಷೆ, ಪರೀಕ್ಷೆ, ಪರೀಕ್ಷೆ ಎನ್ನುವ ಹಂತಕ್ಕೆ ತಲುಪಿದ್ದಾರೆ.
ಇದು ಸಾಲದೆಂಬಂತೆ
ಎಸ್ ಎಸ್ ಎಲ್ ಸಿ ಯಲ್ಲಿ ಮೂರು ಪರೀಕ್ಷೆಗಳು…
ಈ ಮೂಲಕ ಎಂತಹ ತಲೆಮಾರನ್ನು ರೂಪಿಸುತ್ತಿದ್ದಾರೆ??

ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಗುಣಮಟ್ಟದ ಗ್ರಂಥಾಲಯಗಳಿಲ್ಲ, ಕಂಪ್ಯೂಟರ್ ಕಲಿಕೆಯ ಸೌಲಭ್ಯವಿಲ್ಲ..
ಸಮಾನ ಶಿಕ್ಷಣವಿಲ್ಲ
ಆದರೆ ನಿರಂತರ ಪರೀಕ್ಷೆ ಮಾತ್ರವಿದೆ.
ಈ ಮೂಲಕ ಮಕ್ಕಳನ್ನು ಶಿಕ್ಷಣದಿಂದ ಹೊರದೂಡುತ್ತಾರೆ
ಶಿಕ್ಷಣ ಸಚಿವರೇ ನಿಮ್ಮ ಇಲಾಖೆಯ ಗೊತ್ತು ಗುರಿಗಳೇನು? ನಿಮ್ಮದು ಕೇವಲ ಪರೀಕ್ಷೆ ನಡೆಸುವ ಇಲಾಖೆಯೇ?