ಬೆಂಗಳೂರು: ಅಮೆರಿಕ ಮೂಲದ ಎಲೆಕ್ಟ್ರಿಕ್ ಕಾರುಗಳ ತಯಾರಿಕ ಟೆಸ್ಲಾ ಕಂಪನಿ ಕರ್ನಾಟಕದಲ್ಲಿ ಉತ್ಪಾದನ ಘಟನವನ್ನು ಸ್ಥಾಪಿಸಿದರೆ ನಾವು ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಕಂಪನಿಯು ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಪರಿಗಣಿಸಬೇಕು. ಕಂಪನಿ ಘಟಕ ಸ್ಥಾಪಿಸಲು ನಿರ್ಧರಿಸಿದರೆ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಟೆಸ್ಲಾ ಕಂಪನಿ ತನ್ನ ಉದ್ಯಮವನ್ನು ಭಾರತದಲ್ಲಿ ವಿಸ್ತರಿಸಲು ಇಷ್ಟ ಪಡುವುದಾದರೆ ಕರ್ನಾಟಕ ಅದಕ್ಕೆ ಪ್ರಶಸ್ತ ತಾಣವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸೌರಫಲಕಗಳು ಮತ್ತಿತರ ಪರ್ಯಾಯ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಅಲ್ಲದೆ, ಸ್ಪೇಸ್-ಎಕ್ಸ್ ಕಂಪನಿ ಮೂಲಕ ಉಪಗ್ರಹ ಅಂತರ್ಜಾಲ ಸೇವೆ (ಸ್ಟಾರ್ ಲಿಂಕ್) ಒದಗಿಸುತ್ತಿದೆ. ಈ ಕಂಪನಿಗಳನ್ನು ಮುನ್ನಡೆಸುತ್ತಿರುವ ಉದ್ಯಮಿ ಎಲಾನ್ ಮಸ್ಕ್ ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸುವುದಾದರೆ ಸಹಕಾರ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.