ಮಂಡ್ಯ : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಮಾಡಾಳ್ರ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಮಾಡುತ್ತಿವೆ. ಈ ವಿಚಾರವಾಗಿ ಪಕ್ಷದ ಪರ ಬ್ಯಾಟ್ ಬೀಸಲು ಹೋಗಿ ಸಚಿವ ಮಾಧುಸ್ವಾಮಿ ಎಡವಟ್ಟಿನ ಹೇಳಿಕೆಯನ್ನು ನೀಡಿದ್ದಾರೆ. ಮಗ ಲಂಚ ತೆಗೆದುಕೊಂಡರೆ ಅಪ್ಪ ಏನು ಮಾಡೋಕೆ ಆಗುತ್ತೆ..? ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಹೊರಿಸೋಕೆ ವಿರೂಪಾಕ್ಷಪ್ಪ ಏನು ಮಂತ್ರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಮಂಡ್ಯದಲ್ಲಿ ಈ ವಿಚಾರವಾಗಿ ಮಾತನಾಡಿದ ಮಾಧುಸ್ವಾಮಿ ಪ್ರಶಾಂತ್ ಮಾಡಪ್ಪ ಲಂಚ ತೆಗೆದುಕೊಂಡಿದ್ದರೆ ಇದಕ್ಕೆ ಬೊಮ್ಮಾಯಿ ಅಥವಾ ನಮ್ಮ ಶಾಸಕರು ಯಾಕೆ ರಾಜೀನಾಮೆ ನೀಡಬೇಕು..? ಶಾಸಕರ ಮಗ ದುಡ್ಡು ತೆಗೆದುಕೊಂಡಿದ್ದರೆ ಕಾನೂನು ಕ್ರಮವನ್ನು ಆತ ಎದುರಿಸುತ್ತಾನೆ. ಇದಕ್ಕೆ ವಿರೂಪಾಕ್ಷಪ್ಪ ಏನು ಮಾಡೋಕೆ ಆಗುತ್ತೆ..? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಬೇಕಾ ಅಂತಾ ವಿಪಕ್ಷಗಳನ್ನು ಮಾಧು ಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನವರಿಗೆ ಮಾಡೋಕೆ ಬೇರೆ ಕೆಲಸವಿಲ್ಲ. ನಮಗೇನು ಇಂತವರನ್ನು ಹುಡುಕಿಕೊಂಡು ಕೂರೋದೆ ಕೆಲಸವಾ..? ಬಿಜೆಪಿ ಮೇಲೆ ಸಣ್ಣ ಅಪವಾದ ಸಿಕ್ಕರೂ ಸಾಕು ಅದನ್ನು ದೊಡ್ಡ ಮಾಡುತ್ತಾ ಹೋಗುತ್ತಾರೆ . ಇನ್ನೂ ಭ್ರಷ್ಟಾಚಾರ ಸಾಬೀತಾಗಬೇಕಿದೆ. ಒಂದು ವೇಳೆ ಪ್ರಶಾಂತ್ ಸಿಕ್ಕ ಹಣ ಸರಿಯಾಗಿ ದಾಖಲೆ ನೀಡಿದರೆ ಆಗ ಎಲ್ಲರ ಮಾತು ಬಂದ್ ಆಗುತ್ತದೆ. ದುಡ್ಡು ಸಿಕ್ಕ ಕೂಡಲೇ ಅದಕ್ಕೆ ಭ್ರಷ್ಟಾಚಾರ ಅಂತಾ ಹೇಗೆ ಹೇಳೋಕೆ ಆಗುತ್ತೆ ಎಂದು ಹೇಳುವ ಮೂಲಕ ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದಾರೆ.