ತುಮಕೂರು:“ನಮ್ಮ ಅತ್ತೆ ನನಗೆ ಹೊಡೆಯುತ್ತಿದ್ದಾರೆ, ನನಗೆ ಸಹಾಯ ಮಾಡುತ್ತೀರಾ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ಸಹಾಯ ಕೇಳುವ ಮೂಲಕ ರಿಯಾಲಿಟಿ ಚೆಕ್ ನಡೆಸಿದರು.
ಬಳಿಕ, ಜಿಲ್ಲಾಧಿಕಾರಿ ಮೊಬೈಲ್‌ನಿಂದ ಸಭೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಮ್ಮ ಅತ್ತೆ ಹೊಡೆದಿದ್ದಾರೆ, ಸಹಾಯ ಮಾಡ್ತೀರಾ ಎಂದು ತುಮಕೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆ ಮಾಡಿ ಶಾಕ್ ಕೊಟ್ಟರು. ಈ ಮೂಲಕ ಸಹಾಯವಾಣಿ ಕಾರ್ಯಕ್ಷಮತೆ ಪರಿಶೀಲಿಸಿದರು.
ಸಹಾಯವಾಣಿಯ ದೂರವಾಣಿ 24 ಗಂಟೆ ಸಕ್ರಿಯವಾಗಿರುತ್ತೆ ಎಂದ ತಕ್ಷಣ ಅಧಿಕಾರಿಗಳು, ಮೊದಲ ಬಾರಿಗೆ ಸಚಿವೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ, 2ನೇ ಬಾರಿಗೆ ಕರೆ ಸ್ವೀಕರಿಸಿದ ಸಹಾಯವಾಣಿ ಕೇಂದ್ರದ ಸಿಬ್ಬಂದಿ, ಒಂದು ಸಮಸ್ಯೆಯಿದೆ. ನನ್ನ ಅತ್ತೆ ಹೊಡೆದಿದ್ದಾರೆ.ನಾನು ಶಿರಾದಿಂದ ಕಾಲ್ ಮಾಡ್ತಿದ್ದೀನಿ ಎಂದಾಗ ಸಹಾಯವಾಣಿ ಸಿಬ್ಬಂದಿ ಬೆಳಗ್ಗೆ ಬಂದಿದ್ದವರಾ..ನೀವು ಎಂದು ಕೇಳಿದರು.
ಅದಕ್ಕೆ ಸಚಿವೆ, ಇಲ್ಲ, ನಾನು ಈಗಷ್ಟೇ ಕಾಲ್ ಮಾಡಿದ್ದೇನೆಂದರು.ಕೊನೆಗೆ ನಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಸಿಬ್ಬಂದಿ ಬಳಿ ಪರಿಚಯ ಹೇಳಿಕೊಂಡರು.ಸಹಾಯವಾಣಿ ಸಕ್ರಿಯವಾಗಿದ್ದಕ್ಕೆ ಸಚಿವೆ ಅಭಿನಂದನೆ ಸಲ್ಲಿಸಿದರು.ಸಹಾಯವಾಣಿ ವಿಭಾಗದಲ್ಲಿ ನಾಲ್ವರು ಹಗಲು-ರಾತ್ರಿ ಕೆಲಸ ಮಾಡುತ್ತಾರೆಂದು ಅಧಿಕಾರಿಗಳು ತಿಳಿಸಿದರು.ಈ ವೇಳೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು ಮತ್ತಿತರರಿದ್ದರು.