ಮಡಿಕೇರಿ:ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿಯ ಸರ್ಕಾರೀ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ರೂಂಗಳನ್ನು ಉದ್ಘಾಟಿಸಿದರು.
ತಾವೂ ಇದೇ ಶಾಳೆಯಲ್ಲಿ ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ್ದನ್ನು ಸ್ಮರಿಸಿದ ಜಾರ್ಜ್ ಅವರು , ಗ್ರಾಮದ ಬುಡಕಟ್ಟು ಮಕ್ಕಳ ಶಿಕ್ಷಣದ ಸಬಲೀಕರಣಕ್ಕೆ ಅನುವು ಮಾಡಿಕೊಡುವ ಪ್ರಯತ್ನವನ್ನು ಬೆಂಬಲಿಸುವುದಾಗಿ ತಿಳಿಸಿದರು.ಮುಂದುವರಿದು ಮಾತನಾಡಿ ಯುವ ಮನಸ್ಸುಗಳನ್ನು ರೂಪಿಸುವ ಮತ್ತು ಭವಿಷ್ಯದ ಪೀಳಿಗೆಯನ್ನು ಬೆಳೆಸುವ ಶಾಲೆಯ ಗುರುತರ ಹಾಗೂ ಮಹತ್ವದ 100 ವರ್ಷಗಳ ಪ್ರಯಾಣಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತಾ ಶಿಕ್ಷಣವು ಪ್ರಗತಿಯ ಬುನಾದಿಯಾಗಿದೆ, ಸ್ಮಾರ್ಟ್ ತರಗತಿಗಳಂತಹ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ, ಪ್ರತಿ ಮಗುವು ತನ್ನ ಹಿನ್ನೆಲೆಯ ಮಿತಿಗಳನ್ನು ದಾಟಿ ಗುಣಮಟ್ಟದ ಕಲಿಕೆಗೆ ಹಾಗೂ ಅವರ ಕನಸುಗಳ ನನಸಾಗುವಿಕೆಗೆ ದಾರಿಯಾಗುತ್ತದೆ ಎಂದು ತಿಳಿಸಿದರು.
ಹುಲ್ಲಿನ ಗುಡಿಸಲಿನಲ್ಲಿ 1924ರಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾದ ಮಾಯಮುಡಿ ಶಾಲೆ ದಕ್ಷಿಣ ಕೊಡಗಿನ ಪ್ರಮುಖ ಶಿಕ್ಷಣ ಕೇಂದ್ರಗಳಲ್ಲಿ ಒಂದು. ಹಲವಾರು ಮಂದಿ ಪ್ರತಿಭಾನ್ವಿತರನ್ನು ಸಮಾಜಕ್ಕೆ ಕೊಡುಗೆ ನೀಡಿದ ಹಿರಿಮೆ ಈ ಶಾಲೆಯದ್ದಾಗಿದ್ದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.
ರಾಜ್ಯ ರಾಜಕಾರಣದಲ್ಲೇ ಹೆಗ್ಗುರುತು ಮೂಡಿಸಿರುವ ಪ್ರಮುಖ ರಾಜಕಾರಣಿ ಜಾರ್ಜ ಅವರಲ್ಲದೆ ಇದೇ ಶಾಲೆಯಲ್ಲಿ ಓದಿದ ಹಲವು ಮಂದಿ ವಿಜ್ಞಾನಿಗಳಾಗಿದ್ದಾರೆ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧಾನಾ ಕೇಂದ್ರ (ಸಿಎಫ್‌ಟಿಆರ್‌ಐ)ಲ್ಲಿ ವಿಜ್ಞಾನಿಗಳಾಗಿದ್ದಾರೆ.
ಜಿಲ್ಲೆಯ ಹಿರಿಯ ರಾಜಕಾರಣಿ, ವಿಧಾನಪರಿಷತ್ತಿನ ಮಾಜಿ ಸದಸ್ಯರು ಮಾತ್ರವಲ್ಲ ಅಂತರರಾಷ್ಟ್ರೀಯ ಕರಾಟೆ ಪಟುವಾಗಿರುವ ಅರುಣ್ ಮಾಚಯ್ಯ ಸಹ ಇದೇ ಶಾಲೆಯ ವಿದ್ಯಾರ್ಥಿ ಎಂಬುದು ವಿಶೇಷ. ಈ ಶಾಲೆಯಲ್ಲಿ ಓದಿದವರು ಅರಣ್ಯ ಕಾಲೇಜಿನ ಡೀನ್ ಆಗಿದ್ದಾರೆ, ಹಲವು ಬ್ಯಾಂಕಿನ ಹಿರಿಯ ಅಧಿಕಾರಿಗಳಾಗಿದ್ದಾರೆ.
ಬಿಎಸ್‌ಎಫ್‌ನ ಡಿಐಜಿ ಆಗಿದ್ದಾರೆ. ಹಾಕಿ, ಫುಟ್‌ಬಾಲ್ ಆಟಗಾರರಾಗಿದ್ದಾರೆ, ಸೇನೆಗೆ ಸೇರಿ ದೇಶವನ್ನು ಕಾಯುತ್ತಿದ್ದಾರೆ, ವಕೀಲರಾಗಿದ್ದಾರೆ, ಸಂಶೋಧಕರಾಗಿದ್ದಾರೆ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಾಗಿದ್ದಾರೆ ಅಷ್ಟೇ ಅಲ್ಲ, ಇದೇ ಶಾಲೆಯಲ್ಲಿ ಕಲಿತ ಸಹನಾ ಇದೇ ಶಾಲೆಯ ಶಿಕ್ಷಕಿಯೂ ಆಗಿದ್ದಾರೆ.ಹೀಗೆ, ಸಮಾಜದ ಅನೇಕ ವಲಯಗಳಲ್ಲಿ ತಮ್ಮದೇಯಾದ ಕೊಡುಗೆ ನೀಡುವಂತಹ ಪ್ರತಿಭಾನ್ವಿತರನ್ನು ರೂಪಿಸಿದ ಹಿರಿಮೆ ಈ ಶಾಲೆಯದ್ದು.
ಹುಲ್ಲು ಜೋಪಡಿಯಲ್ಲಿ ಆರಂಭವಾದ ಶಾಲೆಗೆ 1956ರಲ್ಲಿ ಹೆಂಚಿನ ಚಾವಣಿ ಸಿಕ್ಕಿತು. ಕೊಡಗಿನ ಮುಖ್ಯಮಂತ್ರಿ ಸಿ.ಎಂ.ಪೂಣಚ್ಚ, ವಿದ್ಯಾಮಂತ್ರಿ ಮಲ್ಲಪ್ಪ ಅವರು ಈ ಕಟ್ಟಡವನ್ನು ಉದ್ಘಾಟಿಸಿದರು.ನಂತರ, 2019ರಲ್ಲಿ ‘ಓಸಾಟ್’ (ಒನ್ ಸ್ಕೂಲ್ ಅಟ್ ಎ ಟೈಮ್ – ಓಎಸ್‌ಎಎಟಿ) ಎಂಬ ಸರ್ಕಾರೇತರ ಸಂಸ್ಥೆಯೊಂದು ₹40 ಲಕ್ಷ ವೆಚ್ಚದಲ್ಲಿ 2019ರಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿಕೊಟ್ಟಿತು.
ಶಾಲೆಯ ಹಳೆಯ ಕಟ್ಟಡವು ಖಾಸಗಿ ಶಾಲಾ ಕಟ್ಟಡವನ್ನೂ ಮೀರಿಸುವಂತಹ ರೀತಿಯಲ್ಲಿ ಬದಲಾಗಿದ್ದು, ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳೂ ಒಂದೆಡೆ ಸೇರಿ ₹ 1.17 ಲಕ್ಷ ಮೊತ್ತದಲ್ಲಿ ಪೀಠೋಪಕರಣಗಳ ದುರಸ್ತಿ ಮಾಡಿರುವುದು ಶಾಲೆ ಮತ್ತೆ ಕಂಗೊಳಿಸಲು ಕಾರಣವಾಗಿದೆ. 6 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿರುವ ಹಾಗೂ ವಿಶಾಲವಾದ ಆಟದ ಮೈದಾನ ಹೊಂದಿರುವ ಈ ಶಾಲೆಯ ಮಾದರಿಯನ್ನೇ ಗೋಣಿಕೊಪ್ಪಲು ದಸರೆಯಲ್ಲಿ ಸ್ತಬ್ಧಚಿತ್ರ ಮಾಡಿರುವುದು ಇದರ ಹೆಗ್ಗಳಿಕೆಗೆ ಸಾಕ್ಷಿ ಎನಿಸಿದೆ.
ಇಲ್ಲಿನ ವಿದ್ಯಾರ್ಥಿಗಳು ಕಳೆದ ವರ್ಷ ನಡೆದ ಕ್ರೀಡಾಕೂಟದಲ್ಲಿ ತಾಲ್ಲೂಕುಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ಶಾಲೆಗೆ ರುದ್ರಬೀಡು, ಧನುಗಾಲ, ಮಾಯಾಮುಡಿ, ಬಾಳಾಜಿ, ನೊಕ್ಯ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 166 ವಿದ್ಯಾರ್ಥಿಗಳು ಬರುತ್ತಿದ್ದಾರೆ.