ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಶಕ್ತಿ ಹಾಗು ಗೃಹಜ್ಯೋತಿ ಯೋಜನೆಗಳನ್ನು ಈಗಾಗಲೇ ಜಾರಿ ಮಾಡಿ ಆಗಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತವಾಗಿ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡುವುದಕ್ಕೆ ಅವಕಾಶ ಕೊಡಲಾಗಿದೆ. ಇನ್ನು ಗೃಹ ಜ್ಯೋತಿ ಯೋಜನೆಯಲ್ಲಿ ಎಲ್ಲರ ಮನೆಗೂ ವಿದ್ಯುತ್ ಫ್ರೀ ಕೊಡುವ ಯೋಜನೆ ತಾಂತ್ರಿಕವಾಗಿ ಜಾರಿಗೆ ಬಂದಿದೆ. ರಾಜ್ಯಾದ್ಯಂತ ಜನರು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಉತ್ತಮ ಹೆಸರು ಬರಬೇಕಿತ್ತಾದರೂ ಇಂಧನ ಇಲಾಖೆ ಮಾಡಿದ್ದ ಎಡವಟ್ಟು ಸರ್ಕಾರದ ವಿರುದ್ಧ ಜನರು ಮಾತನಾಡುವಂತೆ ಮಾಡಿತ್ತು. ಇದೀಗ ಎಲ್ಲದಕ್ಕೂ ಇತಿಶ್ರೀ ಆಡುವುದಕ್ಕೆ ಮಹತ್ವದ ಸಭೆ ಸೋಮವಾರಕ್ಕೆ ನಿಗದಿಯಾಗಿದೆ.
ಹಿಂದಿನ ಸರ್ಕಾರದ ಎಡವಟ್ಟು ಕಾಂಗ್ರೆಸ್‌ಗೆ ಸಂಕಷ್ಟ..!
ಕಳೆದ ಮಾರ್ಚ್ ತಿಂಗಳಲ್ಲಿ ವಿದ್ಯುತ್ ದರ ಏರಿಕೆ ಸಂಬಂಧ ಹಿಂದಿನ ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಬಂದಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ಅಧಿಕೃತವಾಗಿ ಜಾರಿ ಆಗಿರಲಿಲ್ಲ. ತಾತ್ವಿಕೆ ಒಪ್ಪಿಗೆ ಪಡೆದುಕೊಂಡಿದ್ದ ಕೆಇಆರ್‌ಸಿ ಚುನಾವಣಾ ನೀತಿ ಸಂಹಿತೆ ಮುಕ್ತಾಯ ಆಗುತ್ತಿದ್ದ ಹಾಗೆ ದರ ಏರಿಕೆ ಸ್ಲಾಬ್ ಜಾರಿ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ವಿದ್ಯುತ್ ದರ ಹೆಚ್ಚಳ ಆಗಿ ಹೋಗಿತ್ತು. ಇದು ಬಿಜೆಪಿ ಸರ್ಕಾರದ ನಿರ್ಧಾರ ಆದರೂ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರ ವಿದ್ಯುತ್ ಬಿಲ್ ಹೆಚ್ಚಳ ಮಾಡಿದೆ ಎಂದು ಪ್ರಚಾರ ಮಾಡಿ ಯಶಸ್ವಿಯಾದರು. ಇದಕ್ಕೆ ಸಾಕ್ಷಿ ಎನ್ನುವಂತೆ ಗ್ರಾಹಕರ ಕೈಗೆ ಹೆಚ್ಚಳ ಆಗಿರುವ ವಿದ್ಯುತ್ ಬಿಲ್ ಸೇರಿತ್ತು. ಉಚಿತ ವಿದ್ಯುತ್ ಕೊಟ್ಟರೂ ಕಾಂಗ್ರೆಸ್ ಸರ್ಕಾರಕ್ಕೆ ಇರಿಸು ಮುರಿಸು ತಂದಿಟ್ಟಿತ್ತು ಇಂಧನ ಇಲಾಖೆ ಕೆಲಸ. ಇದೀಗ ಬಿಜೆಪಿ ಸರ್ಕಾರದಿಂದ ಕಾಂಗ್ರೆಸ್‌ಗೆ ಎದುರಾಗಿದ್ದ ಸಂಕಷ್ಟ ನಿವಾರಿಸುವ ಸಂಬಂಧ ಸಭೆ ಕರೆಯಲಾಗಿದೆ.
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ FKCCI ಮನವಿ..!
FKCCI ( FEDERATION OF KARNATAKA CHAMBERS OF COMMERCE AND INDUSTRY )ಅಧ್ಯಕ್ಷ ಬಿ.ವಿ ಗೋಪಾಲರೆಡ್ಡಿ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿದ್ಯುತ್ ದರ ಹೆಚ್ಚಳದ ಹೊರೆ ಕಡಿಮೆ ಮಾಡುವಂತೆ ಮನವಿ ಮಾಡಲಾಗಿದೆ. ಶುಕ್ರವಾರ ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾತನಾಡಿರುವ ಗೋಪಾಲರೆಡ್ಡಿ, ನಾವು ವಿದ್ಯುತ್ ದರ ಹೆಚ್ಚಳ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ಸೋಮವಾರ ಮತ್ತೊಂದು ಸಭೆ ಕರೆಯೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ತೆರಿಗೆ ಕಡಿಮೆ ಮಾಡಲು ಸಿಎಂ ಬಳಿ ಮನವಿ ಮಾಡಿದ್ದೇವೆ. ಸದ್ಯ ಇರುವ ಶೇಕಡ 9ರಷ್ಟು ತೆರಿಗೆಯನ್ನು ಶೇಕಡ 4 ಕ್ಕೆ ಇಳಿಸುವಂತೆ ಒತ್ತಾಯ ಮಾಡಿದ್ದೇವೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಕೂಡ ಉಪಸ್ಥಿತರಿದ್ದು, ಸೋಮವಾರ ಇಂಧನ ಸಚಿವರು ಸಭೆ ಕರೆದಿದ್ದಾರೆ, ಸಭೆಯಲ್ಲಿ ನಿರ್ಧಾರ ಹೊರಬೀಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದರ ಹೊರೆ ತಪ್ಪಿಸಲು ಟ್ಯಾಕ್ಸ್ ಇಳಿಸುವ ಮುನ್ಸೂಚನೆ..!
ಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಸಂಬಂಧವಿಲ್ಲ. ಗೃಹಜ್ಯೋತಿ ಹೊರೆಯನ್ನು ಕೈಗಾರಿಕೆಗಳ ಮೇಲೆ ಹಾಕಲಾಗಿದೆ ಎನ್ನುವುದು ಪರಮ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಕೈಗಾರಿಕೋದ್ಯಮಿಗಳ ಮನವಿಗೆ ಸ್ಪಂದನೆ ಸಿಕ್ಕಿದ್ದು, ಬೇಡಿಕೆಗಳ ಬಗ್ಗೆ ಪರಿಶೀಲಿಸಲು ಸಿಎಂ ಒಪ್ಪಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದ ಏರಿಕೆ ಇದು. ನಮ್ಮ ಸರ್ಕಾರ ವಿದ್ಯುತ್ ಶುಲ್ಕವನ್ನು ಏರಿಸುವ ನಿರ್ಧಾರ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ KERC ನಿರ್ಧಾರ ಕೈಗೊಂಡಿತ್ತು. ನಿಯೋಗ ಮಾಡಿರುವ ಮನವಿಯ ಕುರಿತು ಆರ್ಥಿಕ, ಇಂಧನ ಇಲಾಖೆ, ಕಾಸಿಯಾ, FKCCI ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎನ್ನುವ ಭರವಸೆ ನೀಡಲಾಗಿದೆ. KERC ಸ್ವತಂತ್ರ ಸಂಸ್ಥೆಯಾಗಿದ್ದು, ಸರ್ಕಾರ ಅವರ ನಿರ್ಧಾರವನ್ನು ಈಗ ಪ್ರಶ್ನೆ ಮಾಡಲು ಸಾಧ್ಯವಿಲ್ಲ, ಒಂದು ವೇಳೆ ನೀವೆಲ್ಲಾ ಕೋರ್ಟ್ ಮೊರೆ ಹೋದರೆ, ಸರ್ಕಾರ ನಿಮ್ಮ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ತೆರಿಗೆ ಇಳಿಸುವ ಬಗ್ಗೆಯೂ ಮಹತ್ವದ ಸುಳಿವು ಸಿಕ್ಕಿದ್ದು, ಸೋಮವಾರ ಅಂತಿಮ ನಿರ್ಧಾರ ಹೊರ ಬೀಳುವ ಲಕ್ಷಣ ಕಾಣಿಸಿದೆ.
ಕೃಷ್ಣಮಣಿ