ನಿನ್ನೆ ಹುಬ್ಬಳ್ಳಿಯ ತಾರಿಹಾಳ ಕಾರ್ಖಾನೆ ಅವಘಡ ಹಿನ್ನೆಲೆ ಇಂದು ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಅಗ್ನಿ ಅನಾಹುತಕ್ಕೆ ಕಾರಣವಾಗಿರುವ ಈ ಕಾರ್ಖಾನೆಯು ಲೈಸನ್ಸ್ ಪಡೆದಿಲ್ಲ. ಕಾನೂನು ಬಾಹಿರವಾಗಿ ಕೈಗಾರಿಕಾ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸೇರಿದಂತೆ ಶಾಮೀಲಾದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಕಾರ್ಖಾನೆ ಎಂದ ಮೇಲೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಆದ್ರೆ, ಇಲ್ಲಿ ಯಾವುದೇ ಮುಂಜಾಗ್ರತೆಯನ್ನು ಕೈಗೊಂಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ. ಇದರಿಂದ ಮೂವರು ಜೀವ ಕಳೆದುಕೊಳ್ಳುವಂತಾಯಿತು. ಇದು ಸಾಮಾನ್ಯವಲ್ಲ, ಹೋದ ಜೀವ ಮತ್ತೆ ಬರಲ್ಲ.
ಕಾರ್ಖಾನೆಯಲ್ಲಿ ಒಟ್ಟು 14 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ ಘಟನೆಯಲ್ಲಿ 8 ಜನರಿದ್ದರು. ಅನಧಿಕೃತ ಕಾರ್ಖಾನೆಗಳ ಸಮೀಕ್ಷೆ ಮಾಡಲು ಸೂಚನೆ ನೀಡಿದ್ದೇನೆ.
ಜಿಲ್ಲೆಯಲ್ಲಿ 14 ಕೈಗಾರಿಕಾ ಪ್ರದೇಶಗಳಿದ್ದು, ಲೈಸನ್ಸ್ ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ಈ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸ್ಫೋಟದಲ್ಲಿ ಮೃತರ ಮಕ್ಕಳ ಆರೈಕೆ ಹಿನ್ನಲೆ ಬಾಲವಿಕಾಸ ಯೋಜನೆಯಡಿ ಮೂರು ವರ್ಷ ಅನುದಾನ ಒದಗಿಸಲಾಗುತ್ತದೆ ಎಂದರು.