ಬೆಂಗಳೂರು: ಪ್ರೋಟಿನ್ ಮೂಲವಾಗಿರುವ ಮೊಟ್ಟೆ(Egg) ಅನೇಕರಿಗೆ ಬಹುಪ್ರಿಯ. ಕೇವಲ ನಾನ್ ವೆಜಿಟೇರಿಯನ್ಸ್ ಮಾತ್ರವಲ್ಲದೇ ಕೆಲ ವೆಜಿಟೇರಿಯನ್ಸ್ ಕೂಡ ಮೊಟ್ಟೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇದೀಗ ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಮೊಟ್ಟೆಯಲ್ಲಿ ಕ್ಯಾನ್ಸರ್ (Cancer) ಅಂಶ ಪತ್ತೆಯಾಗಿರುವ ಬಗ್ಗೆ ಸುದ್ದಿ ಬೆಳಕಿಗೆ ಬಂದಿದೆ.

ಜನಪ್ರಿಯ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಎಂಬ ಔಷಧದ ಕಣಗಳು ಕಂಡುಬಂದಿದ್ದು, ಇದು ಡಿಎನ್‌ಎಯಿಂದ ಸಂತಾನೋತ್ಪತ್ತಿ ಅಂಗಗಳು ಮತ್ತು ರೋಗನಿರೋಧಕ ವ್ಯವಸ್ಥೆಗೆ ಎಲ್ಲದಕ್ಕೂ ಹಾನಿ ಮಾಡುತ್ತದೆ. ಅಲ್ಲದೇ ಇದು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಈ ಹಿಂದೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆ ಹಾನಿಕಾರಕ ಅಂಶಗಳು ಕಂಡುಬಂದಿಲ್ಲ. ಆದರೆ ಈ ಹೊಸ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಲ್ಯಾಬ್‌ಗಳಲ್ಲಿ ಕೂಲಂಕುಷ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ, ಮೊಟ್ಟೆ ಉತ್ಪಾದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.












