ಬೆಂಗಳೂರು : ಐಟಿ ದಾಳಿಯಲ್ಲಿ ಸಿಕ್ಕ ಕೋಟ್ಯಂತರ ರೂಪಾಯಿ ಹಣ ಈಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕಿತ್ತಾಟಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಆರೋಪಗಳಿಗೆ ಸರಣಿ ಟ್ವೀಟ್ ಮೂಲಕ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ. ತಾವು ಡಿಕೆ ಶಿವಕುಮಾರ್ ಅವರ ಮಾನವನ್ನು ಈ ರೀತಿ ಕಳೆಯಬಾರದು ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಮಾನ್ಯ ಸಿದ್ದರಾಮಯ್ಯನವರೇ, ತಾವು ಡಿಕೆ ಶಿವಕುಮಾರ್ ಅವರ ಮಾನ ಮರ್ಯಾದೆ ಹೀಗೆ ಕಳೆಯಬಾರದು. ಮಾಡಾಳ್ ವಿರೂಪಾಕ್ಷಪನವರ ಮೇಲೆ ನಮ್ಮ ಪಕ್ಷ ಕ್ರಮ ಕೈಗೊಂಡು, ಅವರಿಗೆ ಈ ಬಾರಿ ಟಿಕೆಟ್ ಅನ್ನು ಸಹ ಬಿಜೆಪಿ ನೀಡಲಿಲ್ಲ. ಆದರೆ, ನಿಮ್ಮಲ್ಲಿ ತಿಹಾರ್ ಜೈಲಿನಿಂದ ಬಂದ ಮನುಷ್ಯನನ್ನು ಮಾನ ಮರ್ಯಾದೆ ಇಲ್ಲದೆ ಉಪಮುಖ್ಯಮಂತ್ರಿ ಮಾಡಿದ್ದೀರಿ ಎಂದು ಟಾಂಗ್ ಕೊಟ್ಟಿದ್ದಾರೆ.
ತಿಹಾರ್ ಜೈಲಿನಿಂದ ಬಂದವರ ಪಕ್ಕ ಕುಳಿತುಕೊಂಡು ನೀವು ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುವುದು ಜಾಣ ಕಿವುಡು ಅಲ್ಲವೇ? ಎಂದು ಸಿದ್ದರಾಮಯ್ಯ ಅವರನ್ನು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ. ಅದಲ್ಲದೇ ಡಿಕೆ ಶಿವಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ನೀಡಿರುವ ಫೋಟೋವನ್ನು ಕೂಡ ಯತ್ನಾಳ್ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಅವರ ಟ್ವೀಟ್ಗೆ ತಿರುಗೇಟು ನೀಡಿದ್ದಾರೆ.