ಸಂಘಟಿತ ಪ್ರದರ್ಶನ ನೀಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಪಂದ್ಯದಲ್ಲಿ 3 ರನ್ ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 193 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 190 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಇಶಾನ್ ಮೊದಲ ವಿಕೆಟ್ ಗೆ 95 ರನ್ ಜೊತೆಯಾಟದ ಮೂಲಕ ಭರ್ಜರಿ ಆರಂಭ ನೀಡಿದರು. ರೋಹಿತ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 48 ರನ್ ಗಳಿಸಿ ಔಟಾದರೆ, ಕಿಶನ್ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 43 ರನ್ ಬಾರಿಸಿ ನಿರ್ಗಮಿಸಿದರು.
ಈ ವೇಳೆ ಉಮ್ರಾನ್ ಮಲಿಕ್ ಮಾರಕ ದಾಳಿಗೆ ತತ್ತರಿಸಿದ ನಾಟಕೀಯ ಕುಸಿತ ಅನುಭವಿಸಿತು. ಆದರೆ ಕೆಳ ಕ್ರಮಾಂದಲ್ಲಿ ಟಿಮ್ ಡೇವಿಡ್ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 46 ರನ್ ಗಳಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಹೈದರಾಬಾದ್ ಪರ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದು ಮಿಂಚಿದರು.
ಸನ್ ರೈಸರ್ಸ್ 13 ಪಂದ್ಯಗಳಿಂದ 6 ಜಯ ಹಾಗೂ 7 ಸೋಲಿನೊಂದಿಗೆ 12 ಅಂಕ ಸಂಪಾದಿಸಿ 8ನೇ ಸ್ಥಾನ ಪಡೆದರೆ, ಮುಂಬೈ ಇಂಡಿಯನ್ಸ್ 13 ಪಂದ್ಯಗಳಿಂದ 3 ಜಯ ಹಾಗೂ 10 ಸೋಲಿನೊಂದಿಗೆ 6 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ರಾಹುಲ್ ತ್ರಿಪಾಠಿ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 76 ರನ್ ಬಾರಿಸಿ ತಂಡ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು.
ಪ್ರಿಯಮ್ ಗರ್ಗ್ 26 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 42 ರನ್ ಗಳಿಸಿ ಔಟಾದರೆ, ನಿಕೊಲಸ್ ಪೂರನ್ 38 ರನ್ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.