ಸಂಘಟಿತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಗೆಲುವಿನೊಂದಿಗೆ ಐಪಿಎಲ್ ನಲ್ಲಿ ಅಭಿಯಾನ ಅಂತ್ಯಗೊಳಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ಲೇಆಫ್ ರೇಸ್ ನಿಂದ ಹೊರಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇಆಫ್ ನಲ್ಲಿ ಸ್ಥಾನ ದೊರಕಿಸಿಕೊಟ್ಟಿತು.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್ ಗೆ 159 ರನ್ ಗಳಿಗೆ ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ 19.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರ್ ಸಿಬಿ 14 ಪಂದ್ಯಗಳಿಂದ 8 ಜಯ ಹಾಗೂ 6 ಸೋಲಿನೊಂದಿಗೆ 4ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿದರೆ, ಮುಂಬೈ ಇಂಡಿಯನ್ಸ್ 14 ಪಂದ್ಯಗಳಿಂದ 4 ಜಯ ಹಾಗೂ 10 ಸೋಲಿನೊಂದಿಗೆ 8 ಅಂಕದೊಂದಿಗೆ ಕೊನೆಯ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ 14 ಪಂದ್ಯಗಳಲ್ಲಿ 7 ಜಯ ಹಾಗೂ 7 ಸೋಲಿನೊಂದಿಗೆ 14 ಅಂಕದೊಂದಿಗೆ 5ನೇ ಸ್ಥಾನ ಪಡೆಯುವ ಮೂಲಕ ಕೊದಲೆಳೆ ಅಂತರದಿಂದ ಪ್ಲೇಆಫ್ ಅವಕಾಶ ಕಳೆದುಕೊಂಡಿತು.
ಮುಂಬೈ ನಾಯಕ ರೋಹಿತ್ ಶರ್ಮ (2) ಬೇಗನೇ ಕಳೆದುಕೊಂಡರೂ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ 2ನೇ ವಿಕೆಟ್ ಗೆ 51 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಕಿಶನ್ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 48 ರನ್ ಬಾರಿಸಿ 2 ರನ್ ನಿಂದ ಅರ್ಧಶತಕ ವಂಚಿತರಾದರು. ಬ್ರೆವಿಸ್ 33 ಎಸೆತಗಳಲ್ಲಿ 37 ರನ್ ಬಾರಿಸಿ ಔಟಾದರು.
ತಿಲಕ್ ವರ್ಮಾ (21) ಮತ್ತು ಟಿಮ್ ಡೇವಿಡ್ (34 ರನ್, 11 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್) ಮತ್ತು ರಮಣ್ ದೀಪ್ ಸಿಂಗ್ (13) ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಡೆಲ್ಲಿ ಪರ ನೊರ್ತಜೆ, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು.












