ಕೇಂದ್ರ ಸರ್ಕಾರದ ಪ್ರಮುಖ ಗ್ರಾಮೀಣ ಉದ್ಯೋಗ ಯೋಜನೆಯನ್ನು ಎಪ್ರಿಲ್ 20ರ ಬಳಿಕ ಪುನರಾರಂಭಿಸಲು ಸ್ಪಷ್ಟ ನಿರ್ದೇಶನ ನೀಡಿದ್ದರೂ ಈ ಎಪ್ರಿಲ್‌ನಲ್ಲಿ ಕೇವಲ 30 ಲಕ್ಷ ಜನರಿಗಷ್ಟೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತ್ರಿ ಕಾಯ್ದೆ(MGNRGA)ಯಡಿಯಲ್ಲಿ ಉದ್ಯೋಗ ಒದಗಿಸಲಾಗಿದೆ. ಈವರೆಗೆ ಒಟ್ಟು ಉದ್ಯೋಗ ಪಡೆಯುತ್ತಿದ್ದ ಸರಾಸರಿ ಜನರ 17% ದಷ್ಟು ಮಾತ್ರ ಜನರಿಗೆ ಈ ಬಾರಿ ಉದ್ಯೋಗ ಲಭಿಸಿರುವುದನ್ನು ಅಂಕಿಅಂಶಗಳು ಬಹಿರಂಗಪಡಿಸಿವೆ. ಮಧ್ಯ ಎಪ್ರಿಲ್‌ನಲ್ಲಿ ಕೇವಲ ಒಂದು ಶೇಕಡಾ ಜನರಷ್ಟೇ ಉದ್ಯೋಗ ಪಡೆದಿದ್ದರು. ಈ ಎಪ್ರಿಲ್‌ನ ಅಂಕಿಅಂಶದ ಪ್ರಕಾರ ಇದು ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕಡಿಮೆ.
ಕಳೆದ ವರ್ಷ 1.7 ಕೋಟಿ ಜನರು ಈ ಕಾಯ್ದೆಯ ಮುಖಾಂತರ ಉದ್ಯೋಗ ಪಡೆದುಕೊಂಡಿದ್ದರು. ಈ ಬಾರಿ ಅದರ 82% ಕುಸಿತ ಕಂಡಿದೆ. ಕೆಲವು ರಾಜ್ಯಗಳಲ್ಲಿ ಕಾರ್ಯಸ್ಥಳಗಳನ್ನು ಮರುಪ್ರಾರಂಭಿಸದ ಕಾರಣ ಎಪ್ರಿಲ್ 29ರವರೆಗೆ ಯಾವುದೇ ಉದ್ಯೋಗ ಒದಗಿಸಲಿರಲಿಲ್ಲ. ಹರಿಯಾಣದಲ್ಲಿ 1,005, ಕೇರಳದಲ್ಲಿ 2,014 ಹಾಗೂ ಗುಜರಾತಲ್ಲಿ 6,376 ಉದ್ಯೋಗಗಳನ್ನು ಮಾತ್ರ ನೀಡಲಾಗಿದ್ದು ಈ ರಾಜ್ಯಗಳು ಅತೀ ಕಡಿಮೆ ಉದ್ಯೋಗ ದರ ಹೊಂದಿವೆ. ಆಂಧ್ರಪ್ರದೇಶದಲ್ಲಿ ಕಳೆದ ವರ್ಷ 25 ಲಕ್ಷ ಉದ್ಯೋಗಗಳನ್ನು ಒದಗಿಸಲಾಗಿದ್ದು, ಆದರೆ, ಈ ಬಾರಿ 10 ಲಕ್ಷ ಉದ್ಯೋಗಗಳನ್ನಷ್ತೇ ಒದಗಿಸಲಾಗಿದೆ.
ಲಾಕ್‌ಡೌನ್‌ನಿಂದ ಜೀವನೋಪಾಯ ಕಳೆದುಕೊಂಡಿರುವ ಹಾಗೂ ತಂಡೋಪತಂಡವಾಗಿ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರಿಗೆ ತಮ್ಮ ಹಳ್ಳಿಗಳಲ್ಲಿ ಉದ್ಯೋಗ ಒದಗಿಸಲಾಗದಿರುವುದು ಭಾರತ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಅಲ್ಲದೆ ಕನಿಷ್ಟ ಪರಿಹಾರ ವೇತನವನ್ನು ಕಾರ್ಮಿಕರಿಗೆ ಪಾವತಿಸಬೇಕೆಂಬ ಕೂಗು ಬಲವಾಗಿ ಕೇಳತೊಡಗಿವೆ.
ಎಪ್ರಿಲ್ ತಿಂಗಳ ನಷ್ಟವನ್ನು ಸರಿದೂಗಿಸಲು MGNREGA ಕು
ಟುಂಬಗಳಿಗೆ ಕನಿಷ್ಟ ಹತ್ತು ದಿನಗಳ ವೇತನವನ್ನಾದರೂ ಸರಕಾರ ನೀಡಬೇಕು ಎಂದು IIM ಅಹ್ಮದಾಬಾದ್‌ನಲ್ಲಿ ಪ್ರಭೋದಕಿಯಾಗಿರುವ ಆರ್ಥಿಕ ತಜ್ಞೆ ರೀತಿಕ ಖೇರ್ ಹೇಳಿದ್ದಾರೆ.
MGNREGA ಕಾರ್ಡ್ ಹೊಂದಿರುವ 7.6 ಕೋಟಿ ಕಾರ್ಮಿಕರಿಗೆ ಲಾಕ್‌ಡೌನ್ ಇರುವವರೆಗೆ ಸಂಪೂರ್ಣ ಭತ್ಯೆಯನ್ನು ನೀಡಬೇಕೆಂದು ಮಝ್ದೂರ್ ಕಿಸಾನ್ ಶಕ್ತಿ ಸಂಘಟನೆ ಎಪ್ರಿಲ್ 4ರಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿತ್ತು. ಎಪ್ರಿಲ್ 20ರಂದು ಮಧ್ಯಂತರ ಅರ್ಜಿ ಸಲ್ಲಿಸಿ ಮಾರ್ಚ್ 24ರಂದು ಲಾಕ್‌ಡೌನ್ ಘೋಷಿಸುವಾಗ ಕೆಲಸದಲ್ಲಿದ್ದ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕೆಂದು ಕೋರಿತ್ತು. ಲಾಕ್‌ಡೌನ್ ಘೋಷಿಸುವಾಗ ಈ ಯೋಜನೆಯಡಿಯಲ್ಲಿ ಸುಮಾರು 1.6 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕನಿಷ್ಟ ನಿರುದ್ಯೋಗ ಭತ್ಯೆಯನ್ನಾದರೂ ಈ ಕಾರ್ಮಿಕರಿಗೆ ಪಾವತಿಸಬೇಕೆಂದು ಅರ್ಜಿ ಸಲ್ಲಿಸಿರುವ ಕಾರ್ಯಕರ್ತರಲ್ಲಿ ಒಬ್ಬರಾದ ನಿಖಿಲ್ ಡೇ ಅಭಿಪ್ರಾಯಿಸಿದ್ದಾರೆ.
ಈ ಯೋಜನೆಯಡಿಯಲ್ಲಿ ನೋಂದಾಯಿಸಿದ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗದಿದ್ದರೆ ಮೊದಲ ತಿಂಗಳಲ್ಲಿ ಸಂಬಳದ ಕಾಲು ಭಾಗವನ್ನು, ಎರಡನೆ ತಿಂಗಳಲ್ಲಿ ಸಂಬಳದ ಅರ್ಧ ಭಾಗವನ್ನು, ನಂತರದ ತಿಂಗಳಲ್ಲಿ ಸಂಪೂರ್ಣ ವೇತನವನ್ನು ನೀಡಬೇಕೆಂದು ಯೋಜನೆ ಷರತ್ತು ವಿಧಿಸುತ್ತದೆ.