ನಮ್ಮ ಮೆಟ್ರೋಗೆ ಇಂದು ಸಂತಸದ ದಿನ. ಸುದೀರ್ಘ 13 ತಿಂಗಳ ಬಳಿಕ ಸಾಕಷ್ಟು ಅಡೆ ತಡೆ ಸವಾಲುಗಳನ್ನು ಮೆಟ್ಟಿ ನಿಂತು TBM ಊರ್ಜಾ ತನಗೆ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಇಂದು ಭೂಮಿಯಿಂದ ಹೊರ ಬಂದಿದೆ. ಇನ್ನು ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸಿದ್ರೆ, ಮೆಟ್ರೋ ಸಿಬ್ಬಂದಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.
13 ತಿಂಗಳು.. 855 ಮೀಟರ್ ಉದ್ದದ ಸುರಂಗಮಾರ್ಗ.. ನಮ್ಮ ಮೆಟ್ರೋ ಯಶಸ್ವಿ ಕಾಮಗಾರಿ !
ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಎಲ್ಲರು ಕುತೂಹಲದಿಂದ ವೀಕ್ಷಣೆ ಮಾಡಲು ಕಾಯುತ್ತಿದ್ದ ದೃಶ್ಯ ಇದೆ ನೋಡಿ. ಸತತ 13 ವರೆ ತಿಂಗಳ ಯಶಸ್ವಿ ಕಾರ್ಯಚರಣೆ ಮುಗಿಸಿ, ಮೆಟ್ರೋ ಮಾರ್ಗಕ್ಕೆ ಸುರಂಗ ಕೊರೆಯುತ್ತಿದ್ದ ಊರ್ಜಾ ಹೆಸರಿನ ಟಿಬಿಎಂ ಕಂಟೋನ್ಮೆಂಟ್ ನಿಂದ ಶಿವಾಜಿನಗರದವರೆಗೆ 855 ಮೀಟರ್ ಸುರಂಗ ಕೊರೆದು, ಇಂದು ಬೆಳಿಗ್ಗೆ 10 ಗಂಟೆಗೆ ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಭೂಮಿ ಯಿಂದ ಯಶಸ್ವಿಯಾಗಿ ಹೊರ ಬರುವ ಮೂಲಕ ಮೆಟ್ರೋ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಖದಲ್ಲಿ ಸಂತಸ ಮೂಡಿಸಿತು. ಈ ಅದ್ಬುತ ಕ್ಷಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಸಾಕ್ಷಿಯಾದರು. ಬಳಿಕ ಮಾತನಾಡಿದ ಸಿಎಂ, ಮೆಟ್ರೋ ಸುರಂಗ ಮಾರ್ಗ ಮಾಡುವುದು ಸವಾಲಿನ ಕೆಲಸ. ಎಲ್ಲಾ ಸವಾಲಿನ ನಡುವೆ ಮೆಟ್ರೋ ನಿಗಮ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲ ಹಂತದ ವೇಳೆ ಹಲವಾರು ಸಮಸ್ಯೆಗಳು ಎದುರಾಗಿದ್ದು, ಎರಡನೇ ಹಂತವೂ ಮೆಟ್ರೊ ನಿಗಮಕ್ಕೆ ಚಾಲೆಂಜ್ ಆಗಿದೆ. ನಮ್ಮ ಮೆಟ್ರೋದ ಮೂರು ಹಂತಗಳು ಪೂರ್ಣಗೊಂಡ ಬಳಿಕ ಸಾರಿಗೆ ವ್ಯವಸ್ಥೆಗೆ ನಮ್ಮ ಮೆಟ್ರೊ ಲೈಫ್ ಲೈನ್ ಆಗಲಿದೆ ಎಂದರು.
ನಮ್ಮ ಮೆಟ್ರೋ ಹಂತ ಎರಡರ ಹೊಸ ಮಾರ್ಗದ ಕಾಳೇನಾ ಅಗ್ರಹಾರ ಮತ್ತು ನಾಗವಾರ ನಡುವೆ 21.26 ಕಿ.ಮೀ ಮೆಟ್ರೊ ಮಾರ್ಗವಿದ್ದು, 7.5 ಕಿ.ಮಿ ಎಲಿವೇಟೆಡ್ ಹಾಗೂ 13.76 ಕಿ.ಮೀ ಸುರಂಗ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಜೋಡಿ ಸುರಂಗ ಮಾರ್ಗಗಳು ನಿರ್ಮಾಣ ವಾಗುತ್ತಿದ್ದು ಇದರ ಉದ್ದ 21 ಕಿ.ಮೀ ಇದೆ. ಸುರಂಗ ಕೊರೆಯುವ ಕಾರ್ಯದಲ್ಲಿ ಸದ್ಯ 9 ಯಂತ್ರಗಳು ಕಾರ್ಯಪ್ರವೃತ್ತವಾಗಿದ್ದು ಅದರಲ್ಲಿ ಊರ್ಜಾ ಪ್ರಥಮವಾಗಿ ಹೊರಬಂದಿದೆ. ಶಿವಾಜಿನಗರ ಅತ್ಯಂತ ಹಳೆಯ ವಸತಿ ಪ್ರದೇಶವಾಗಿರುವುದರಿಂದ ಹಳೆಯ ಮನೆಗಳು, ಸಡಿಲವಾದ ಮಣ್ಣು, ಬಾವಿ, ಹಳೆಯ ಬೋರ್ವೆಲ್ಗಳು ಸುರಂಗ ಮಾರ್ಗದಲ್ಲಿ ಇದ್ದ ಪರಿಣಾಮ ಸಾಕಷ್ಟು ಜಾಗರುಕತೆಯಿಂದ ಕೆಲಸ ಮಾಡಲಾಗಿದೆ.
ಈ ಸುರಂಗ ಕೊರೆಯುವ ವೇಳೆ ಶಿವಾಜಿನಗರದ ಹಲವು ಹಳೆಯ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆ ಮನೆಗಳನ್ನ ಖಾಲಿ ಮಾಡಿಸಿ ಬೇರೆ ಕಡೆ ಇರಲು ವ್ಯವಸ್ಥೆ ಮಾಡಿತ್ತು BMRCL. ಈಗ ಹೊರಬಂದಿರುವ ಊರ್ಜಾ ಯಂತ್ರವನ್ನು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗುವುದು. ಅಲ್ಲಿಯೂ ಈ ಯಂತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಇದರ ಜೊತೆಗೆ ಉಳಿದ 8 TBM ಯಂತ್ರಗಳು ಆದಷ್ಟು ಬೇಗ ತನ್ನ ಗುರಿ ಮುಟ್ಟಲಿ ಅನ್ನೋದೆ ಬೆಂಗಳೂರು ಜನರ ಆಶಯ.