ನಮ್ಮ ಮೆಟ್ರೋದ 3ನೇ ಹಂತದ ಕಿತ್ತಳೆ ಮಾರ್ಗದ ಯೋಜನೆ ನಿರ್ಮಾಣಕ್ಕಾಗಿ 6500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮೊದಲು 11,000 ಮರಗಳನ್ನು ಕಡಿಯುವ ಯೋಜನೆಯಿತ್ತು, ಆದರೆ ಪರಿಸರ ಹೋರಾಟಗಾರರ ಆಕ್ಷೇಪಣೆಯಿಂದಾಗಿ ಈ ಸಂಖ್ಯೆ ಕಡಿಮೆಯಾಗಿದೆ. ಈ ಯೋಜನೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ಆತಂಕ ವ್ಯಕ್ತವಾಗಿದೆ.

15,611 ಸಾವಿರ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ
ಸದ್ಯ ಪರಿಸರ ಹೋರಾಟಗಾರರ ಆಕ್ರೋಶದ ನಡುವೆಯೂ 6500 ಮರಗಳನ್ನು ಕಟ್ ಮಾಡಲು ನಮ್ಮ ಮೆಟ್ರೋ ಮುಂದಾಗಿದೆ. ಎರಡು ಮಾರ್ಗವನ್ನು ಹೊಂದಿರುವ ಮೂರನೇ ಹಂತವು ಜೆಪಿ ನಗರದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಎರಡು ಎತ್ತರದ ಕಾರಿಡಾರ್‌ಗಳನ್ನು ಒಳಗೊಂಡಿದೆ. 15,611 ಸಾವಿರ ಕೋಟಿ ರೂ ವೆಚ್ಚದಲ್ಲಿ ಕಿತ್ತಳೆ ಮಾರ್ಗದ ಕಾಮಗಾರಿ ನಡೆಯಲಿದೆ.

ಒಟ್ಟು ಈ ಕಿತ್ತಳೆ ಮಾರ್ಗವು ಒಟ್ಟಾರೆ 44.65 ಕಿಮೀ ಉದ್ದವಿದೆ. ನಗರದಾದ್ಯಂತ ಸುಮಾರು 11 ಸಾವಿರ ಮರಗಳ ಮೇಲೆ ಪರಿಣಾಮ ಬೀರಬಹುದು ಆದರೆ ಯಾವುದೂ ಅಂತಿಮವಾಗಿಲ್ಲ. ಈ ಹಿಂದೆ ಮೆಟ್ರೋ ರೈಲು ನಿಗಮ 11,137 ಮರಗಳನ್ನು ಕಡಿಯಬೇಕು, ಇಲ್ಲವೇ ಸ್ಥಳಾಂತರಕ್ಕೆ ನಿರ್ಧರಿಸಿತ್ತು.

ಬಿಎಂಆರ್‌ಸಿಎಲ್ ಈ ಬಗ್ಗೆ ಜನರೊಂದಿಗೆ ಸಭೆ ಮಾಡಲಿದೆ. ಮೂರು ದಿನಗಳ ಕಾಲ ನಡೆಯುವ ಸಭೆಯಲ್ಲಿ ಸಾರ್ವಜನಿಕರು ತಮ್ಮ ಆಲೋಚನೆಗಳು ಮತ್ತು ಚಿಂತೆಗಳನ್ನು ಹಂಚಿಕೊಳ್ಳಬಹುದಾಗಿದೆ. ನಮ್ಮ ಮೆಟ್ರೋ ಅಧಿಕಾರಿಗಳು ಈ ಸಭೆಯ ನೇತೃತ್ವ ವಹಿಸಲಿದ್ದಾರೆ.