ಮೇಕೆದಾಟು ಜಾರಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ವಿಳಂಬಕ್ಕೆ ಕಾಂಗ್ರೆಸ್ ಕಾರಣ. ಇದರ ಹೊಣೆ ಕಾಂಗ್ರೆಸ್ ಹೊರಬೇಕು ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದ ಜನರ ಕ್ಷಮೆಯನ್ನು ಕೇಳಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ದಾಖಲೆ ಸಹ ಬಿಡುಗಡೆ ಮಾಡಿದ್ದೀನಿ. 2014ರಲ್ಲಿ ಸಿಎಂ ಅನುಮೋದನೆ ಆದಾಗಲೇ ಜಾರಿ ಮಾಡಬೇಕಿತ್ತು. ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಂ.ಬಿ.ಪಾಟೀಲ್ ಎಲ್ಲವನ್ನೂ ಬಿಟ್ಟು ಹರಿಕಥೆ ಪುರಾಣ ಹೇಳುತ್ತಿದ್ದಾರೆ. ಇದು ರಾಜ್ಯದ ಜನರಿಗೆ ಬೇಕಿಲ್ಲ. ರಾಜ್ಯದ ರೈತರ ಪಾಲಿಗೆ ಎಂ.ಬಿ.ಪಾಟೀಲ ದ್ರೋಹ ಮಾಡಿ, ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ. ಡಿಕೆಶಿ, ಸಿದ್ದು, ಎಂ.ಬಿ.ಪಾಟೀಲರಿಗೆ ಹೇಳ್ತಿದಿನಿ 2013ರಲ್ಲಿ ಕೃಷ್ಣೆಯ ನಡಿಗೆ ಪಾದಯಾತ್ರೆ ಮಾಡಿ ಮೋಸ ಮಾಡಿದ್ರಿ. ಈ ಮೋಸಕ್ಕೆ ನೀವು ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಕಾರಜೋಳ ಆಗ್ರಹಿಸಿದ್ದಾರೆ.