ಬೀದರ್: ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್ಎಸ್ಎಸ್) ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಡುವೆ ಬಿರುಕು ಮೂಡಿದ್ದು, ಶೀಘ್ರದಲ್ಲಿಯೇ ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೀದರ್ನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಮಂತ್ರಿ ಬದಲಾಗುತ್ತಾರೆ. ಆರ್ಎಸ್ಎಸ್ನವರು ಮೋದಿಯನ್ನ ಪ್ರಧಾನಿ ಸ್ಥಾನದಿಂದ ಇಳಿಸುತ್ತಾರೆ. ಆರ್ಎಸ್ಎಸ್ & ಬಿಜೆಪಿ ಮಧ್ಯೆ ಬಿರುಕು ಇದೆ. ಪ್ರಧಾನಿ ಮೋದಿ ಆರ್ಎಸ್ಎಸ್ನವರ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನ ಇದೆ. ಕೇಂದ್ರದಲ್ಲೂ 30-40 ಸೀಟು ಮಾತ್ರ ವ್ಯತ್ಯಾಸ ಇವೆ. ಕೇಂದ್ರ ಸರ್ಕಾರ ಬೀಳುತ್ತದೆ ಎಂಬ ಸಂದೇಹ ನನಗಿದೆ. ಮೋದಿ ಬೀಳಿಸಲಿಕ್ಕೆ ಆರ್ಎಸ್ಎಸ್ನವರಿಗೆ ಪವರ್ ಇಲ್ವಾ? ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ 5 ವರ್ಷ ಅಧಿಕಾರ ನಡೆಸುತ್ತದೆ. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಜಾತಿ ಜನಗಣತಿ ಜಾರಿಗೆ ಸ್ವಪಕ್ಷದ ಶಾಸಕರು, ಸಚಿವರು ವಿರೋಧ ವಿಚಾರದ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವ ಅಂದ್ಮೇಲೆ ಪರ ವಿರೋಧ ಇರಲೇಬೇಕು. ನಮ್ಮ ಪಕ್ಷದಲ್ಲೂ ಪರ-ವಿರೋಧ ಇರಬೇಕು, ವಿಪಕ್ಷದಲ್ಲೂ ಪರ-ವಿರೋಧ ಇರಬೇಕು. ಕೊನೆಗೆ ಸರ್ಕಾರದ ನಿಲುವು ನಮ್ಮ ನಿಲುವಾಗಿರುತ್ತದೆ. ಕ್ಯಾಬಿನೆಟ್ನಲ್ಲಿ ಚರ್ಚಿಸಿ ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬೀದರ್ ಜಿಲ್ಲೆಯ ಹುಮನಾಬಾದ್ನಲ್ಲಿ ಹೇಳಿದರು.