ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಸಂಸತ್ತಿನಲ್ಲಿ ಗುರುವಾರ (ಆಗಸ್ಟ್ 3) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರತಿಪಕ್ಷಗಳ ನಾಯಕರೊಬ್ಬರಿಗೆ ಬೆದರಿಕೆ ಧಾಟಿಯಲ್ಲಿ ಮಾತನಾಡಿದ್ದಾರೆ. ಇದು ವಿವಾದ ಉಂಟು ಮಾಡಿದೆ.
ಲೇಖಿ ಅವರು ತಮ್ಮ ಪ್ರತಿಸ್ಪರ್ಧಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಘೋಷಣೆ ಕೂಗಿವೆ. ಅನೇಕ ನಾಯಕರು ಲೇಖಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಲೋಕಸಭೆಯಲ್ಲಿ ಗುರುವಾರ ದೆಹಲಿ ಸೇವಾ ಮಸೂದೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಮೀನಾಕ್ಷಿ ಲೇಖಿ ಅವರು ಈ ಬಗ್ಗೆ ವಿಷಯ ಮಂಡಿಸುತ್ತಿದ್ದಾಗ ಪ್ರತಿಪಕ್ಷ ನಾಯಕರೊಬ್ಬರು ಮಧ್ಯಪ್ರವಶಿಸಿದ್ದಾರೆ. ಇದಕ್ಕೆ ಕುಪಿತರಾದ ಲೇಖಿ ಅವರು ಪ್ರತಿಪಕ್ಷ ನಾಯಕನ ವಿರುದ್ಧ ಬೆದರಿಕೆ ರೀತಿಯಲ್ಲಿ ಮಾತನಾಡಿದ್ದಾರೆ.
“ಒಂದು ನಿಮಿಷ ಸುಮ್ಮನಿರಿ, ಇಲ್ಲದಿದ್ದರೆ ಜಾರಿ ನಿರ್ದೇಶನಾಲಯ (ಇ.ಡಿ) ನಿಮ್ಮ ಮನೆಗೆ ದಾಳಿ ಮಾಡಬಹುದು” ಎಂದು ಗುಡುಗಿದ್ದಾರೆ. ಲೇಖಿ ಅವರ ಈ ವರ್ತನೆ ಪ್ರತಿಪಕ್ಷಗಳ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಮೈತ್ರಿ ಬಿಟ್ಟು ದಹಲಿ ಬಗ್ಗೆ ಯೋಚಿಸಿ: ಪ್ರತಿಪಕ್ಷಗಳಿಗೆ ಅಮಿತ್ ಶಾ ತಿರುಗೇಟು
“ಲೇಖಿ ಅವರ ಮಾತಿನಿಂದ ಕೇಂದ್ರ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಸಾಬೀತಾಗಿದೆ” ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವಕ್ತಾರ ಕ್ಲೈಡ್ ಕ್ರಾಸ್ಟೊ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.
“ಬಿಜೆಪಿ ಸಚಿವರು ಈಗ ಬಹಿರಂಗವಾಗಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ನಾಯಕರ ವಿರುದ್ಧ ಇ.ಡಿ ದಾಳಿಯ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ಪ್ರತೀಕಾರದ ಗುಣ ಈಗ ಗುಟ್ಟಾಗಿ ಉಳಿದಿಲ್ಲ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರ ಹೇಳಿಕೆ ನಾಚಿಕೆಗೇಡಿತನದಿಂದ ಕೂಡಿದೆ” ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಗೋಖಲೆ ಟ್ವೀಟ್‌ನಲ್ಲಿ ಅಣಕವಾಡಿದ್ದಾರೆ.