ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಂದರ್ಭ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ರೂಪದರ್ಶಿ ಅರ್ಚನಾ ಗೌತಮ್ ಅವರಿಗೆ ಟಿಕೆಟ್ ಸಿಕ್ಕಿತ್ತು. ಇಂಥದ್ದೊಂದು ವಿಷಯ ನ್ಯೂಸ್ ಚಾನಲ್‌ಗಳಿಗೆ ಸಿಕ್ಕರೆ ಸುಮ್ಮನಿರುತ್ತವೆಯೇ? ಕಳ್ಳು ಕುಡಿದ ಮಂಗಗಳಂತೆ, ಬಿಕಿನಿಯಲ್ಲಿರುವ ಅರ್ಚನಾ ಫೋಟೊಗಳನ್ನು ಬ್ಲೋಅಪ್ ಮಾಡಿ ತುತ್ತೂರಿ ಊದಿ ಕುಣಿದು ಕುಪ್ಪಳಿಸಿದವು. ಇದಕ್ಕೆ ಅರ್ಚನಾ ಪ್ರತಿಕ್ರಿಯೆ ನೀಡಿದಾಗಲೂ, ಮತ್ತೊಮ್ಮೆ ಅವರ ಬಿಕಿನಿ ಚಿತ್ರಗಳನ್ನೇ ಕಾಣಿಸಿ ಸುದ್ದಿ ಮಾಡಿದವು! ಈ ವಿಷಯದಲ್ಲಿ ನ್ಯೂಸ್ ಚಾನಲ್‌ಗಳು ಎಷ್ಟು ವೇಗವಾಗಿ ಸುದ್ದಿ ಮಾಡಿದ್ದವು ಅಂದರೆ, ವಿರೋಧಪಕ್ಷ ಬಿಜೆಪಿ ಅರ್ಚನಾರನ್ನು ಟ್ರೋಲ್ ಮಾಡುವ ಮುನ್ನವೇ ನ್ಯೂಸ್ ಚಾನಲ್‌ಗಳು ಟ್ರೋಲ್ ಮಾಡಿದ್ದವು.
ಅರ್ಚನಾ ಸುದ್ದಿಗೆ ಸಂಬಂಧಿಸಿದಂತೆ ನ್ಯೂಸ್ ಚಾನಲ್‌ಗಳು ಮಾತ್ರವಲ್ಲ, ಕನ್ನಡದ ಪತ್ರಿಕೆಗಳೂ ಕಣ್ಣಿಗೆ ಬಿಕಿನಿ ಹಾಕಿಕೊಂಡೇ ಮಾತನಾಡಿದ್ದವು. ಅದರಲ್ಲಿ ‘ಪ್ರಜಾವಾಣಿ’ ಕೂಡ ಸೇರಿತ್ತು. ಆ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅರ್ಚನಾ ಸುದ್ದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ಗೊಳೋ ಎಂದರು. “ಪ್ರಜಾವಾಣಿಯೂ ಹೀಗಾಯ್ತೇ?” ಎಂದು ಭಾವಾವೇಶದಲ್ಲಿ ಎದೆ ಬಡಿದುಕೊಂಡರು. ಅಸಲಿಗೆ, ಈ ಅಮಾಯಕ ಮಂದಿ ಬಹಳ ಹಿಂದುಳಿದಿದ್ದಾರೆ, ಅವರ ನೆಚ್ಚಿನ ‘ಪ್ರಜಾವಾಣಿ’ ಬಹಳ ಮುಂದೆ ಹೋಗಿಯಾಗಿದೆ. ಎಲ್ಲಿಯವರೆಗೂ ಮುಂದೆ ಹೋಗಿದೆ ಅಂದರೆ, ಅದರ ವೆಬ್‌ಸೈಟ್‌ನಲ್ಲಿ ಇಂಥವರು ಗೊಳೋ ಅನ್ನಬಹುದಾದ ಹಲವು ಸುದ್ದಿಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಧರ್ಮ’ವನ್ನು ಮಾರುವ ಒಂದು ವಿಶೇಷ ವಿಭಾಗವೂ ಉಂಟು.
‘ಪ್ರಜಾವಾಣಿ’ ಪತ್ರಿಕೆಯ ವೆಬ್‌ಸೈಟ್ ತೆರೆದು, ಮೇಲಿನ ಮೊದಲ ಅಡ್ಡಸಾಲಿನಲ್ಲಿ ಕಣ್ಣಾಡಿಸಿದರೆ, ಮೂರನೇ ಪದವೇ ‘ಧರ್ಮ.’ ಇದು ದಾನ-ಧರ್ಮದ ವಿಚಾರಕ್ಕೆ ಸಂಬಂಧಿಸಿದ ವಿಭಾಗವಂತೂ ಅವರಪ್ಪನಾಣೆಗೂ ಅಲ್ಲ. ಬದಲಿಗೆ, ಹಿಂದೂ ಧರ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು, ಉಪದೇಶಾಮೃತಗಳನ್ನು, ತರಹೇವಾರಿ ಕತೆಗಳನ್ನು ತಂದು ಒಗೆಯಲೆಂದೇ ಕಟ್ಟಿದ ಅಮಲಿನ ಗೋದಾಮು. ಇಡೀ ವಿಭಾಗ ತಡಕಿದರೆ, ಇತರ ಧರ್ಮಗಳಿಗೆ ಸಂಬಂಧಿಸಿದ ಪೋಸ್ಟು ಕಂಡದ್ದು ಒಂದೇ. ಅದೂ, ‘ಯೇಸು ಹೇಳಿದ ಪ್ರಸಂಗಗಳು’ ಎಂಬ ಕಥಾಗುಚ್ಛ, ಹೊಲೆಯಾಲ ದೊರೆಸ್ವಾಮಿ ಎಂಬುವವರು ಬರೆದದ್ದು. ಬಹುಶಃ, ಯಾವುದೋ ಪುರವಣಿಯಲ್ಲಿ ಪ್ರಿಂಟ್ ಮಾಡಿದ್ದನ್ನೇ ಇಲ್ಲಿಗೆ ತಂದು ಎಸೆದಿರಬಹುದು.
ಇನ್ನು, ವ್ಯಾಪಾರಿ ‘ವಿಜಯ ಕರ್ನಾಟಕ’ದ ವೆಬ್‌ಸೈಟ್‌ನಲ್ಲೂ ‘ಧರ್ಮ’ದ ಹೆಸರಿನಲ್ಲೊಂದು ವಿಭಾಗ ಉಂಟು. ಈ ಗೋದಾಮು ಹೊಕ್ಕರೆ, ಘಾಟು ತಗುಲಿ, ಕಣ್ಣು-ಮೂಗಲ್ಲೆಲ್ಲ ನೀರು ಬಂದು, ವಾಕರಿಕೆ ಬಂದು, ತಲೆ ಸುತ್ತಿ ಬಿದ್ದೋಗೋದು ನಿಶ್ಚಿತ. ಅತ್ಯಂತ ಕಳಪೆ, ಕೊಳೆತ ಸಂಗತಿಗಳನ್ನೂ ಅಷ್ಟು ಚಂದಾತಿಚಂದ ಮಾಡಿ, ಸುದ್ದಿ-ಲೇಖನ ರೂಪದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಿಭಾಗದಲ್ಲಿ ಗುಡ್ಡೆ ಹಾಕಲಾದ ಇತ್ತೀಚಿನ ಎರಡು ಲೇಖನಗಳ ಹೆಡ್ಡಿಂಗು ಹೇಳಿದರೆ, ನಿಮಗೇ ಅರ್ಥವಾದೀತು ನೋಡಿ. ‘೨೦೨೨ ಗಣರಾಜ್ಯೋತ್ಸವ ವಿಶೇಷ: ಮಹಾಭಾರತ ಕಾಲದಲ್ಲಿ ಗಣರಾಜ್ಯ ವ್ಯವಸ್ಥೆ ಹೇಗಿತ್ತು ಗೊತ್ತಾ?,’ ‘ಈ ದಿಕ್ಕಿನಲ್ಲಿ ಕಸ ಹಾಕಿದರೆ ದಾರಿದ್ರ್ಯ ಬರೋದು ಗ್ಯಾರೆಂಟಿ ಎನ್ನುತ್ತೆ ಧರ್ಮಗ್ರಂಥ.’ ಇನ್ನೊಂದು ರಸವತ್ತಾದ ಲೇಖನದ ಹೆಡ್ಡಿಂಗು ಬೊಗಳುತ್ತೆ: ‘ಸಂಕಷ್ಟ ಚತುರ್ಥಿಯಂದು ಈ ತಪ್ಪುಗಳನ್ನು ಮಾಡಿದರೆ ಗಣೇಶ ಎಂದಿಗೂ ಕ್ಷಮಿಸಲಾರ, ಹುಷಾರ್!’ ವೃತ್ತಿಪರತೆ ಅಂದರೆ ಏನೆಂದೇ ಗೊತ್ತಿಲ್ಲದ ಈ ಪತ್ರಿಕೆಯ ಮೂಢರಿಗೆ, ‘ಗಣರಾಜ್ಯ’ ಬೇರೆ, ‘ಗಣರಾಜ್ಯೋತ್ಸವ’ ಬೇರೆ ಎಂಬುದಾಗಲೀ, ಗಣರಾಜ್ಯೋತ್ಸವದ ಹಿನ್ನೆಲೆಯಾಗಲೀ ತಲೆಯಲ್ಲಿ ಇದ್ದಂತಿಲ್ಲ. ಅಸಲಿಗೆ ಇವರಿಗೆ ತಲೆ ಇರುವುದೇ ಅನುಮಾನ; ಅಕಸ್ಮಾತ್ ಇದ್ದರೂ ಯಾರಿಗಾದರೂ ಅಡವಿಟ್ಟಿರುವುದಂತೂ ಪಕ್ಕಾ.
ಬುದ್ಧಿವಂತರು ಎನಿಸಿಕೊಂಡಿವರೆಲ್ಲ ಕನ್ನಡ ಪತ್ರಿಕೆಗಳ ಬಗ್ಗೆ ಅಂದುಕೊಂಡಿರುವುದು ಏನೆಂದರೆ, ‘ಪ್ರಜಾವಾಣಿ’ ಬಹಳ ಸೆಕ್ಯುಲರ್ರು, ‘ವಿಜಯ ಕರ್ನಾಟಕ’ ಪರವಾಗಿಲ್ಲ ಅಂತ. ಆದರೆ, ತಮ್ಮ ವೆಬ್‌ಸೈಟ್‌ನಲ್ಲಿ ಹಿಂದೂ ಧರ್ಮಕ್ಕೆಂದೇ ಎಕ್ಸ್‌ಕ್ಲೂಸಿವ್ ವಿಭಾಗಗಳನ್ನು ತೆರೆದು, ಅದರಲ್ಲಿ ತಲೆ-ಬುಡ ಇಲ್ಲದ ಅಮಲಿನ ಸುದ್ದಿ-ಲೇಖನಗಳನ್ನು ಗುಡ್ಡೆ ಹಾಕಿಕೊಂಡು ಹಲ್ಕಿರಿಯುತ್ತ ಕುಂತಿರುವುದು ಈ ಎರಡು ಪತ್ರಿಕೆಗಳೇ. ಹಾಗೆ ನೋಡಿದರೆ, ಧರ್ಮ ಅಂದಾಕ್ಷಣ ತೋಳೇರಿಸಿಕೊಂಡು ಬರುವ ಬೀದಿ ಬದಿ ಪೋಕರಿಗಳಂತೆ ಆಡುವ ‘ವಿಜಯವಾಣಿ,’ ‘ಕನ್ನಡಪ್ರಭ’ ಮತ್ತು ‘ವಿಜಯವಾಣಿ’ ಪತ್ರಿಕೆಗಳಾದರೂ ನೇರಾನೇರ ವರ್ತಿಸುತ್ತವೆ. ಆದರೆ, ಪಕ್ಕಾ ಹಿಕ್ಮತ್ತಿನ ಆಟ ಆಡುವ, ರಕ್ಷಣಾತ್ಮಕ ಆಟದ ತಂತ್ರ ಅರಿತಿರುವ ‘ಪ್ರಜಾವಾಣಿ’ ಮತ್ತು ‘ವಿಜಯ ಕರ್ನಾಟಕ’ ಧರ್ಮವನ್ನು ನೇರವಾಗಿಯೇ ಸೇಲಿಗಿಟ್ಟಿವೆ. ಅದೇ ಹೊತ್ತಿಗೆ ತಮ್ಮ ಮುಖ ಮುಚ್ಚಿಕೊಂಡಿವೆ.
ಇಲ್ಲೊಂದಷ್ಟು ಕೇಳ್ವಿಗಳು ಕಾಡುತ್ತವೆ. ಧರ್ಮದ ವಿಷಯದಲ್ಲಿ ಇಂಥದ್ದೊಂದು ತಿರುಪೆ ಗೋದಾಮು ತೆರೆಯಬೇಕೆಂದು ಈ ಪತ್ರಿಕೆಗಳ ದೊಡ್ಡ ಮನುಷ್ಯರಿಗೆ ಅನ್ನಿಸಿದ್ಯಾಕೆ? ‘ಧರ್ಮ’ ಎಂಬ ಹೆಸರಿನಲ್ಲಿ ಹೊಸ ವಿಭಾಗ ತೆರೆದರೂ, ಅದನ್ನು ‘ಹಿಂದೂ ಧರ್ಮ’ದ ಸುದ್ದಿ-ಲೇಖನಗಳನ್ನಷ್ಟೇ ಗುಡ್ಡೆ ಹಾಕುವ ತಿಪ್ಪೆ ಮಾಡಿದ್ದಕ್ಕೆ ನಿಜವಾದ ಕಾರಣವೇನು? ‘ಸರ್ವಧರ್ಮ ಸಮನ್ವಯ’ದ ಚಳವಳಿಗಳ ಈ ನಾಡಿನಲ್ಲಿ, ‘ಧರ್ಮ’ ಅಂದರೆ ‘ಹಿಂದೂ ಧರ್ಮ’ ಮಾತ್ರ ಎಂದು ಈ ಪತ್ರಿಕೆಗಳು ನಿರ್ಧಸಿರುವಾಗ, ಇವುಗಳು ನಿತ್ಯವೂ ಕೊಡುವ ಸುದ್ದಿಗಳು ಧರ್ಮನಿರಪೇಕ್ಷವಾಗಿ, ಪಕ್ಷಾತೀತವಾಗಿ ಇರುತ್ತವೆ ಎಂದು ನಂಬುವುದು ಹೇಗೆ? ‘ಧರ್ಮ’ ಅಂದರೆ ‘ಹಿಂದೂ ಧರ್ಮ’ವಷ್ಟೇ ಎಂದು ಹೇಳುವಲ್ಲೇ, ಇತರ ಧರ್ಮಗಳ ಕುರಿತ ಅಸಹನೆ, ಅಸಮಾಧಾನ, ಕೀಳರಿಮೆ, ಪೂರ್ವಗ್ರಹ, ದ್ವೇಷ ಎದ್ದುಕಾಣುತ್ತದೆ; ಈ ಹಿನ್ನೆಲೆಯಲ್ಲಿ ಈ ಎರಡೂ ಪತ್ರಿಕೆಗಳ ಸುದ್ದಿಗಳು ಹಿಂದೂಯೇತರ ಧರ್ಮಗಳ ವಿರುದ್ಧ ದ್ವೇಷ ಪ್ರಸಾರ ಮಾಡುವ ಒಳ ಉದ್ದೇಶ (ಅಜೆಂಡಾ) ಹೊಂದಿರುತ್ತವೆ ಎಂದು ಸುಲಭವಾಗಿ ಹೇಳಬಹುದಲ್ಲವೇ? ‘ಧರ್ಮ’ವನ್ನು ಬಳಸಿ ದೇಶ ಒಡೆಯುವ, ಸಮುದಾಯಗಳ ನಡುವೆ ಬೆಂಕಿ ಹಚ್ಚುವ ರಾಜಕೀಯ ಅಪರಾಧಗಳು ತಾರಕಕ್ಕೆ ಏರಿರುವ ಈ ಸಂದರ್ಭದಲ್ಲಿ, ಎಲ್ಲ ಜನಸಾಮಾನ್ಯರನ್ನೂ ಲಿಂಗ, ಜಾತಿ, ಧರ್ಮ ಮತ್ತು ಪ್ರದೇಶಗಳ ಕನ್ನಡಕ ಬಿಟ್ಟು ನೋಡಬೇಕೆನ್ನುವ ಕನಿಷ್ಠ ಮಟ್ಟದ ವೃತ್ತಿಪರತೆ (ಪ್ರೊಫೆಷನಲಿಸಂ) ಕಾಣಿಸುವಲ್ಲೂ ಈ ಪತ್ರಿಕೆಗಳು ಸೋತಿಲ್ಲವೇ?