• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಮಾಧ್ಯಮ ಸ್ವಾತಂತ್ರ್ಯ- ಮಾರುಕಟ್ಟೆ ಮತ್ತು ಸಮಾಜ

ಪ್ರತಿಧ್ವನಿ by ಪ್ರತಿಧ್ವನಿ
May 10, 2024
in ಅಂಕಣ, ಅಭಿಮತ
0
ಮಾಧ್ಯಮ ಸ್ವಾತಂತ್ರ್ಯ- ಮಾರುಕಟ್ಟೆ ಮತ್ತು ಸಮಾಜ
Share on WhatsAppShare on FacebookShare on Telegram

ಲೇಖಕರು — ನಾ ದಿವಾಕರ

ADVERTISEMENT


ಒಳಗೊಳ್ಳುವಿಕೆಯಿಂದ ವಿಮುಖವಾದ ಸಮಾಜದಲ್ಲಿ ಸಂವಹನ ಸ್ವಾತಂತ್ರ್ಯವೇ ಕುಸಿಯುತ್ತದೆ

ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 2023ರ 161ನೆಯ ಸ್ಥಾನದಿಂದ ಕೊಂಚ ಮೇಲೇರಿ 2024ರಲ್ಲಿ 159ನೆಯ ಸ್ಥಾನವನ್ನು ಪಡೆದಿದ್ದರೂ ಇದು ಆಶಾದಾಯಕವಾಗಿ ಕಾಣುವುದಿಲ್ಲ. ಏಕೆಂದರೆ 158ನೆಯ ಸ್ಥಾನದಲ್ಲಿರುವ ಟರ್ಕಿ, 152ನೆಯ ಸ್ಥಾನ ಪಡೆದಿರುವ ಪಾಕಿಸ್ತಾನ ಹಾಗೂ 150ನೆಯ ಸ್ಥಾನದಲ್ಲಿರುವ ಶ್ರೀಲಂಕಾ ದೇಶಗಳಿಗಿಂತಲೂ ಭಾರತ ಹಿಂದಿದೆ. ಆಡಳಿತಾರೂಢ ಕೇಂದ್ರ ಬಿಜೆಪಿ ಸರ್ಕಾರ ಇಂತಹ ಜಾಗತಿಕ ಸೂಚ್ಯಂಕಗಳನ್ನು ನಿರಾಕರಿಸುತ್ತಲೇ ಬಂದಿದೆ. ತನ್ನ ಆಳ್ವಿಕೆಯನ್ನು ವಿಮರ್ಶಾತ್ಮಕವಾಗಿ ನೋಡುವ ಅಥವಾ ಟೀಕಿಸುವ ಯಾವುದೇ ದತ್ತಾಂಶಗಳನ್ನು “ ವಿರೋಧಿಗಳ ಪಿತೂರಿ ” ಎಂದೇ ಭಾವಿಸುವ ಸರ್ಕಾರಕ್ಕೆ ಈ ವರದಿಯೂ ಸಹ ಮತ್ತೊಂದು ಹುನ್ನಾರವಾಗಿ ಕಾಣುವುದು ಸಹಜ. ಯಾವುದೇ ಸಮೀಕ್ಷಾ ವರದಿಗೆ ಅಲ್ಲಿ ಅನುಸರಿಸಲಾಗುವ ಮಾನದಂಡಗಳು ಮತ್ತು ಮೂಲ ಆಕರ ಮಾಹಿತಿ ಮುಖ್ಯವಾಗುವುದರಿಂದ, ಪರ ವಿರೋಧಿ ಅಭಿಪ್ರಾಯಗಳೂ ಸಹಜವಾಗಿ ವ್ಯಕ್ತವಾಗುತ್ತವೆ.
ವರ್ತಮಾನ ಭಾರತವು ತನ್ನ ನಿರ್ಣಾಯಕ ಚುನಾವಣೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ನಾಡಿನ ಜನತೆಯ ಮುಂದೆ ಎರಡು ಸ್ಪಷ್ಟ ಆಯ್ಕೆಗಳಿವೆ. ಮೊದಲನೆಯದು ಭಾರತದ ಸಂವಿಧಾನ-ಪ್ರಜಾಪ್ರಭುತ್ವ ಹಾಗೂ ಮೂಲ ಸಾಂವಿಧಾನಿಕ ಆಶಯಗಳನ್ನು ಸಂರಕ್ಷಿಸುವುದು. ಎರಡನೆಯದು ನವ ಉದಾರವಾದ-ಬಲಪಂಥೀಯ ಹಿಂದುತ್ವ-ಕಾರ್ಪೋರೇಟ್‌ ಮಾರುಕಟ್ಟೆಯ ನಿರ್ದೇಶನದಂತೆ ಸ್ವತಂತ್ರ ಭಾರತದ ಮೂಲ ಸ್ವರೂಪವನ್ನೇ ಬದಲಿಸುವಂತಹ ನಿರಂಕುಶಾಧಿಕಾರದ ಆಡಳಿತ ವ್ಯವಸ್ಥೆಗೆ ಅವಕಾಶ ಕಲ್ಪಿಸುವುದು. ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಯೋಚಿಸುವ ಮುನ್ನ ಈ ಎರಡು ಆಯ್ಕೆಗಳಲ್ಲಿ ಭಾರತದ ಮುಖ್ಯವಾಹಿನಿ ಮಾಧ್ಯಮಗಳು (ಮುದ್ರಣ-ವಿದ್ಯುನ್ಮಾನ-ಸಾಮಾಜಿಕ) ಯಾವ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳುತ್ತವೆ ಎನ್ನುವುದು ಮುಖ್ಯವಾಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಅಥವಾ ಆಯಾಮ ಎಂದೇ ಭಾವಿಸಲ್ಪಡುವ ಮಾಧ್ಯಮ ವಲಯ ಬಹುಶಃ ತನ್ನ ಈ ಸ್ಥಾನವನ್ನು ಕಳೆದುಕೊಳ್ಳುತ್ತಿರುವುದು ನವ ಭಾರತದ ವಾಸ್ತವ.

ಮಾರುಕಟ್ಟೆ-ಬಂಡವಾಳದ ಹಿಡಿತ

ಮಾಧ್ಯಮಗಳ ಬದಲಾದ ಲಕ್ಷಣ ಮತ್ತು ಆದ್ಯತೆಗಳಿಗೂ ಬದಲಾಗುತ್ತಿರುವ ಭಾರತದ ಬಂಡವಾಳಶಾಹಿ ಅರ್ಥವ್ಯವಸ್ಥೆಗೂ ನೇರ ಸಂಬಂಧ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗೋದಿ ಮೀಡಿಯಾ ಅಥವಾ ಮಡಿಲ ಮಾಧ್ಯಮಗಳು ಎಂದೇ ಬಣ್ಣಿಸಲ್ಪಡುವ ದೇಶದ ಮುಖ್ಯವಾಹಿನಿಯ ಬಹುಪಾಲು ಸಂವಹನ ಮಾಧ್ಯಮಗಳು ಇದೇ ಮಾರುಕಟ್ಟೆ ಆರ್ಥಿಕತೆಯನ್ನು ವ್ಯವಸ್ಥಿತವಾಗಿ ಪೋಷಿಸುವ, ಸಮರ್ಥಿಸುವ ವಾರಸುದಾರಿಕೆಯನ್ನು ವಹಿಸಿಕೊಂಡಿವೆ. ಮುದ್ರಣ ಮಾಧ್ಯಮಗಳೂ ಸಹ ಇದೇ ಹಾದಿಯನ್ನು ಹಿಡಿಯುತ್ತಿದ್ದು ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಎಲ್ಲವೂ ವಂದಿಮಾಗಧ ಸಂಸ್ಕೃತಿಯನ್ನೇ ಅಪ್ಪಿಕೊಳ್ಳುತ್ತಿವೆ. ಆಡಳಿತಾರೂಢ ಪಕ್ಷದೊಡನೆ ಆಪ್ತ ಸಂಬಂಧವನ್ನು ಕಟ್ಟಿಕೊಳ್ಳುವ ಮೂಲಕ ಸಮೂಹ ಮಾಧ್ಯಮಗಳು ಸಾಂಸ್ಥಿಕವಾಗಿ ತಮ್ಮ ಮೂಲ ವೃತ್ತಿಪರತೆ-ವೃತ್ತಿಧರ್ಮ ಹಾಗೂ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುತ್ತಿರುವುದು ಪ್ರಸ್ತುತ ಸನ್ನಿವೇಶಕ್ಕೆ ಮುಖ್ಯ ಕಾರಣವಾಗಿ ಕಾಣುತ್ತದೆ.
ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದೆ ಎನ್ನುವುದಕ್ಕಿಂತಲೂ ಹೆಚ್ಚಾಗಿ, ತಮ್ಮ ಮಾರುಕಟ್ಟೆ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾಧ್ಯಮ ಸಂಸ್ಥೆಗಳೇ ಕಾರ್ಪೋರೇಟೀಕರಣ ಪ್ರಕ್ರಿಯೆಗೆ ತೆರೆದುಕೊಳ್ಳುವ ಮೂಲಕ ಆಳ್ವಿಕೆಯ ನಿಕಟವರ್ತಿಗಳಾಗಿ ಪರಿವರ್ತನೆ ಹೊಂದುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ತಮ್ಮ ಸ್ವಂತಿಕೆ ಹಾಗೂ ಸ್ವಾಯತ್ತತೆಯನ್ನು ಉಳಿಸಿಕೊಂಡಿರುವಂತೆ ಕಾಣುವ ಮುದ್ರಣ ಮಾಧ್ಯಮಗಳೂ ಸಹ ಆಳ್ವಿಕೆಯ ಕೆಂಗಣ್ಣಿಗೆ ಗುರಿಯಾಗದಂತೆ ಎಚ್ಚರ ವಹಿಸುವ ಒಂದು ವಿಧಾನವನ್ನೂ ಕಾಣುತ್ತಿದ್ದೇವೆ. ಇಡೀ ದೇಶದಲ್ಲಿ ಕೆಲವೇ ಬೆರಳೆಣಿಕೆಯ ಪತ್ರಿಕೆಗಳಷ್ಟೇ ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತ ನೀತಿಗಳನ್ನು ಖಂಡಿಸುವ ದಾರ್ಷ್ಟ್ಯ ತೋರುತ್ತಿವೆ. ಮೊಳೆ ಜೋಡಿಸುವ ಯುಗದಲ್ಲಿ ಅಕ್ಷರ-ಕಾಗುಣಿತ-ವ್ಯಾಕರಣದ ದೃಷ್ಟಿಯಿಂದ ಗಮನವಿಟ್ಟು ಮುದ್ರಣಕ್ಕೆ ಸಿದ್ಧವಾಗುತ್ತಿದ್ದ ಪತ್ರಿಕೆಗಳು, ಡಿಜಿಟಲ್‌ ಯುಗದಲ್ಲಿ ತಮ್ಮ ಮಾರುಕಟ್ಟೆಯ ಅಸ್ತಿತ್ವದ ಉಳಿವಿನ ದೃಷ್ಟಿಯಿಂದ, ಆಳ್ವಿಕೆಯ ಅವಕೃಪೆಗೆ ಪಾತ್ರರಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಕ್ಷರ-ಪದ-ಪರಿಭಾಷೆಗಳನ್ನು ಡಿಜಿಟಲ್‌ ಆಗಿ ಜೋಡಿಸುವುದನ್ನು ಕಲಿತಿವೆ. ಮಾರುಕಟ್ಟೆ ದೃಷ್ಟಿಯಲ್ಲಿ ಇದು ಅನಿವಾರ್ಯ ಎನ್ನಬಹುದಾದರೂ ತಾತ್ವಿಕವಾಗಿ ಪ್ರಶ್ನಾರ್ಹವೇ.
ಮಾಧ್ಯಮಗಳ ಸ್ವಾತಂತ್ರ್ಯ ಹರಣ ಒಂದೆಡೆ ಸರ್ಕಾರಗಳಿಂದ ನಡೆಯುತ್ತಿದ್ದರೆ ಮತ್ತೊಂದು ಬದಿಯಿಂದ ಸರ್ಕಾರೇತರ ಸಾಂಸ್ಥಿಕ ನೆಲೆಗಳಿಂದಲೂ ನಡೆಯುತ್ತಿರುವುದು ಇಂದಿನ ಭಾರತದ ದುರಂತ. ಭಿನ್ನಮತ-ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುವ ವ್ಯವಧಾನವನ್ನೇ ಕಳೆದುಕೊಂಡಿರುವ ಒಂದು ಸಮಾಜದಲ್ಲಿ ಇದು ಸಹಜವಾಗಿ ಉದ್ಭವಿಸುವ ಸನ್ನಿವೇಶ. ಆಳ್ವಿಕೆಯನ್ನು ನಿರ್ದೇಶಿಸುವ ಮತೀಯ ನಿರೂಪಣೆಗಳು, ಧಾರ್ಮಿಕ ವ್ಯಾಖ್ಯಾನಗಳು ಹಾಗೂ ಮಾರುಕಟ್ಟೆ ಪೋಷಿತ ಅಭಿಪ್ರಾಯಗಳನ್ನೇ ಮತ್ತಷ್ಟು ರೋಚಕಗೊಳಿಸುವ ಮೂಲಕ ತಮ್ಮ ಮಾರುಕಟ್ಟೆ ಅಸ್ತಿತ್ವವನ್ನು ಉಳಿಸಿಕೊಳ್ಳುವ ಒಂದು ಮಾದರಿಯನ್ನು ಭಾರತದ ಬಹುತೇಕ ಮಡಿಲ ಮಾಧ್ಯಮಗಳು ಅಳವಡಿಸಿಕೊಂಡಿವೆ. ಕಾರ್ಪೋರೇಟ್‌ ಮಾರುಕಟ್ಟೆಯ ವ್ಯಾಪ್ತಿ ಹಾಗೂ ಅಧಿಕಾರ ಕೇಂದ್ರಗಳ ಹಿಡಿತದಲ್ಲಿ ಈ ಸಂವಹನ ಮಾಧ್ಯಮಗಳು ತಮ್ಮ ವೃತ್ತಿಪರತೆಯನ್ನೂ ಮರೆತು, ಪತ್ರಿಕೋದ್ಯಮವನ್ನು ಮಾರುಕಟ್ಟೆಯ ಮತ್ತೊಂದು ಭಾಗ ಮಾಡಿವೆ. ತಾವು ಹೂಡಿದ ಬಂಡವಾಳವನ್ನು ಲಾಭಸಮೇತ ಬಾಚಿಕೊಳ್ಳಲು ಹವಣಿಸುವ ಕಾರ್ಪೋರೇಟ್‌ ಮಾರುಕಟ್ಟೆಯು ಈ ವಾಹಿನಿಗಳ ಮೂಲಕವೇ ಅಧಿಕಾರ ವಲಯಗಳಲ್ಲಿ ತಮ್ಮ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತವೆ.

ನೆಲಮಟ್ಟದ ಸಾಮಾಜಿಕ ವಾಸ್ತವಗಳು

ಹಾಗಾಗಿಯೇ ತಳಮಟ್ಟದ ಸಮಾಜದಲ್ಲಿ ಜನಸಾಮಾನ್ಯರನ್ನು ಬಾಧಿಸುವ ಜ್ವಲಂತ ಸಮಸ್ಯೆಗಳು, ಜಟಿಲ ಸವಾಲುಗಳು ಮಡಿಲ ಮಾಧ್ಯಮಗಳಿಗೆ ಮುಖ್ಯವಾಗುವುದಿಲ್ಲ. ವಸ್ತುನಿಷ್ಠತೆಯನ್ನು ಕಳೆದುಕೊಂಡು ವ್ಯಕ್ತಿನಿಷ್ಠೆಗೆ ಬದ್ಧರಾಗುವ ಮೂಲಕ ಮಾಧ್ಯಮ ವಕ್ತಾರರೂ, ನಿರೂಪಕರೂ, ಪತ್ರಕರ್ತರೂ ಸಹ ತಮ್ಮ ವೃತ್ತಿನಿಷ್ಠೆಯನ್ನು ಬದಿಗೊತ್ತಿ ಆಜ್ಞಾನುಪಾಲನೆಯ ಮಾರ್ಗವನ್ನು ಅನುಸರಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಒಡಲಾಳವನ್ನು ಭೇದಿಸಿ ಅಲ್ಲಿನ ನೋವು, ತಲ್ಲಣಗಳನ್ನು ಹೊರಗೆಡಹುವ ಮೂಲಕ ಆಳ್ವಿಕೆಯ ವಾರಸುದಾರರಿಗೆ ಎಚ್ಚರಿಕೆ ನೀಡಬೇಕಾದ ಪತ್ರಿಕೋದ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳು, ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು, ಸಾಮಾನ್ಯ ಜನತೆಯನ್ನು ಅನಾಥರನ್ನಾಗಿ ಮಾಡಿದೆ. ಈ ಅನಾಥ ಜನತೆಯನ್ನು ಕೋಮುವಾದಿ ನಿರೂಪಣೆಗಳ ಮೂಲಕ ಸಮ್ಮೋಹನಗೊಳಿಸುವ ಮಡಿಲ ಮಾಧ್ಯಮಗಳು ಆಳ್ವಿಕೆಯ ನಿರೂಪಣೆಗಳನ್ನೇ ಅಂತಿಮ ಸತ್ಯದಂತೆ ಬಿಂಬಿಸುತ್ತಲೇ ನೆಲದ ವಾಸ್ತವಗಳನ್ನು ಸಾರ್ವಜನಿಕರಿಂದ ಮರೆಮಾಚುತ್ತವೆ. ಮುಖ್ಯವಾಹಿನಿಯನ್ನು ಪ್ರತಿನಿಧಿಸುವ ಬಹುಪಾಲು ಮಾಧ್ಯಮಗಳು ಇದೇ ಮಾದರಿಯನ್ನು ಅನುಸರಿಸುತ್ತಿರುವುದರಿಂದಲೇ ಪರ್ಯಾಯ ಮಾಧ್ಯಮಗಳು ಸಾಮಾಜಿಕ ತಾಣಗಳ ಮೂಲಕ ತಮ್ಮ ನೆಲೆ ಕಂಡುಕೊಳ್ಳಲು ಹೆಣಗಾಡುವಂತಾಗಿದೆ.
ಮುದ್ರಣ ವಲಯದಲ್ಲಿ ಸಣ್ಣ, ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟ್ರೀಯ ಪತ್ರಿಕೆಗಳು ತಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಮಾರುಕಟ್ಟೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸರ್ಕಾರದ ಜಾಹೀರಾತುಗಳಿಲ್ಲದೆ ಪತ್ರಿಕಾ ಸಮೂಹವನ್ನು ಮುನ್ನಡೆಸುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಜವಾಗಿಯೇ ಆಡಳಿತಾರೂಢ ಸರ್ಕಾರಗಳ ಜಾಹೀರಾತಿಗೆ ದುಂಬಾಲು ಬೀಳುವ ಪತ್ರಿಕೋದ್ಯಮ ತನ್ನ ಸ್ವಂತಿಕೆ ಮತ್ತು ಸ್ವಾಯತ್ತತೆಯನ್ನು ಸ್ವಲ್ಪ ಮಟ್ಟಿಗಾದರೂ ಕಳೆದುಕೊಳ್ಳುತ್ತದೆ. ಕೆಲವೇ ಪತ್ರಿಕೆಗಳು ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತಾ ಸರ್ಕಾರದ ಆಡಳಿತ ನೀತಿಗಳ ವಿರುದ್ಧ ದನಿ ಎತ್ತುತ್ತಿದ್ದರೂ, ಸಂಪಾದಕತ್ವದಲ್ಲಿ ತಮ್ಮ ಮೇಲೆ ತಾವೇ ಹೇರಿಕೊಳ್ಳುವ ನಿರ್ಬಂಧ-ನಿಬಂಧನೆಗಳು ಪತ್ರಿಕಾ ಸ್ವಾತಂತ್ರ್ಯದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ. ಈ ನಿಬಂಧನೆಗಳನ್ನೇ ಪತ್ರಿಕಾ ಸಾಹಿತ್ಯಕ್ಕೂ ವಿಸ್ತರಿಸುವ ಮೂಲಕ ಬಹುತೇಕ ಪತ್ರಿಕೆಗಳು ಜನಸಾಮಾನ್ಯರಿಗೆ ತಲುಪಬೇಕಾದ ನಿಜಾಂಶಗಳಿಗೆ ತಡೆಗೋಡೆಗಳನ್ನು ನಿರ್ಮಿಸುತ್ತವೆ.

ಆಧುನಿಕ ತಂತ್ರಜ್ಞಾನ ಯುಗದ ನವ ಶತಮಾನದ ಯುವಪೀಳಿಗೆಗೆ ತಲುಪಲೇಬೇಕಾದ ಉಪಯುಕ್ತ ಸಂದೇಶಗಳನ್ನು ಆದಷ್ಟೂ ಸಂಕ್ಷಿಪ್ತವಾಗಿ ತಲುಪಿಸುವ ಒಂದು ಮಾದರಿಗೆ ಈ ನಿಬಂಧನೆಗಳೂ ಅಲ್ಪಮಟ್ಟಿಗೆ ಕಾರಣ ಎನಿಸುತ್ತದೆ. ಇಂದಿನ ಯುವಸಮೂಹ ಸುದೀರ್ಘ ಬರಹಗಳನ್ನು ಓದುವುದಿಲ್ಲ ಎಂಬ ಸಾರ್ವಜನಿಕ-ಸಾರ್ವತ್ರಿಕ ಚರ್ಚಾರ್ಹ ಅಭಿಪ್ರಾಯವೂ ವ್ಯಾಪಕವಾಗಿದ್ದು, ಬಹುತೇಕ ಪತ್ರಿಕೆಗಳು ಇದನ್ನು ಅಕ್ಷರಶಃ ಪಾಲಿಸುತ್ತಲೇ ಬಂದಿವೆ. ಈ ಅಭಿಪ್ರಾಯದ ವಾಸ್ತವತೆಯನ್ನು ಬದಿಗಿಟ್ಟು ನೋಡಿದರೂ, ಇತಿಹಾಸವನ್ನೇ ಅರಿಯದ ಒಂದು ಬೃಹತ್‌ ಸಮೂಹಕ್ಕೆ ಸಮಾಜವನ್ನು ಅರಿತುಕೊಳ್ಳಲು ಬೇಕಾದ ವಿಶ್ಲೇಷಣಾತ್ಮಕ ಮಾಹಿತಿಯನ್ನು ಒದಗಿಸಲು ಈ ಮಾದರಿ ಅಡ್ಡಿಯಾಗಿರುವುದು ಸ್ಪಷ್ಟ. ಇತ್ತೀಚಿನ ದಿನಗಳಲ್ಲಿ ಖಾಸಗಿ ಯುಟ್ಯೂಬ್‌ಗಳು ಈ ಕೊರತೆಯನ್ನು ಕೊಂಚ ಮಟ್ಟಿಗೆ ನೀಗಿಸುತ್ತಿವೆ. ಆದರೆ ವಿದ್ಯುನ್ಮಾನ ಸಂವಹನದಿಂದ ಹೊರತಾದ ಒಂದು ಬೃಹತ್‌ ಜನಸಂಖ್ಯೆಯೂ ನಮ್ಮ ನಡುವೆ ಇರುವುದನ್ನು ನಾಗರಿಕ ಸಮಾಜ ಮನಗಾಣಬೇಕಿದೆ.
ಸಾಮಾಜಿಕ ಮಾಧ್ಯಮಗಳ ಪ್ರಸರಣ

ಕಾರ್ಪೋರೇಟ್‌ ಮಾರುಕಟ್ಟೆಯ ಹಿಡಿತದಲ್ಲಿರುವ ವಾಟ್ಸಾಪ್‌, ಟ್ವಿಟರ್-ಎಕ್ಸ್‌, ಇನ್ಸ್‌ಟಾಗ್ರಾಂ, ಫೇಸ್‌ಬುಕ್‌ ಮುಂತಾದ ಸಾಮಾಜಿಕ ತಾಣಗಳ ಮೂಲಕ ರವಾನಿಸಲಾಗುವ ಕೆಲವೇ ಕ್ಷಣಗಳ ಸಂದೇಶಗಳು ಯುವ ಸಮೂಹವನ್ನು ಮತ್ತಷ್ಟು ಭ್ರಮಾಧೀನವಾಗಿಸುವುದಷ್ಟೇ ಅಲ್ಲದೆ, ಇಲ್ಲಿ ದೊರೆಯಬಹುದಾದ ಅರ್ಧಸತ್ಯಗಳನ್ನೇ ಅಂತಿಮ ಸತ್ಯವೆಂದು ಭಾವಿಸುವತ್ತ ಕರೆದೊಯ್ಯುತ್ತವೆ. ಕ್ಷಣಮಾತ್ರದಲ್ಲಿ ಕೋಟ್ಯಂತರ ಜನರನ್ನು ತಲುಪುವ ಈ ಸಂದೇಶಗಳಿಗೆ ಉತ್ತರದಾಯಿತ್ವ ಇರುವುದಿಲ್ಲ, ಇವುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಅವಕಾಶವೂ ಇರುವುದಿಲ್ಲ. ಆದರೂ ಇದು ಒಂದು ಬೃಹತ್‌ ಜನಸಮೂಹವನ್ನು ಹಿಡಿದಿಡುವ ಸಾಧನವಾಗಿ ಪರಿಣಮಿಸಿದೆ. ಇಲ್ಲಿ ಸೃಷ್ಟಿಯಾಗುವ ಅರ್ಧಸತ್ಯಗಳನ್ನು ಅಥವಾ ಸುಳ್ಳುಗಳನ್ನು ಭೇದಿಸಿ, ಜನಸಾಮಾನ್ಯರ ಮುಂದೆ ಸತ್ಯವನ್ನು ತೆರೆದಿಡುವ ಜವಾಬ್ದಾರಿಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ಹೊರಬೇಕು. ದುರದೃಷ್ಟವಶಾತ್‌ ಈ ಮಾಧ್ಯಮ ಸಮೂಹಗಳೆಲ್ಲವೂ ಇಂದು ಕಾರ್ಪೋರೇಟ್‌ ಮಡಿಲಲ್ಲಿ ವಿರಮಿಸುತ್ತಿವೆ.
ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದೆ ಎಂದರೆ ಸರ್ಕಾರ ನೇರವಾಗಿ ಸೆನ್ಸರ್‌ಷಿಪ್‌ ಹೇರಿದೆ ಎಂದರ್ಥವಲ್ಲ. ಮಾಧ್ಯಮಗಳ ವಸ್ತುನಿಷ್ಠ ವರದಿಗಾರಿಕೆಯನ್ನು ನಿಯಂತ್ರಿಸುವ ಹಲವು ಮಾರ್ಗಗಳನ್ನು ಸರ್ಕಾರ ಕಂಡುಕೊಂಡಿದೆ. ಸರ್ಕಾರೇತರ ಶಕ್ತಿಗಳು ಸಾಂಸ್ಥಿಕ ನೆಲೆಯಲ್ಲೇ ತಮ್ಮ ಕಾರ್ಯಪಡೆಗಳ ಮೂಲಕ ದಿಟ್ಟ ಪತ್ರಿಕೋದ್ಯಮವನ್ನು ನಿಯಂತ್ರಣದಲ್ಲಿರಿಸುವ ಒಂದು ಪ್ರಕ್ರಿಯೆಯೂ ಇದಕ್ಕೆ ಒಂದು ಕಾರಣ. ಮತ್ತೊಂದು ಕಾರಣವೆಂದರೆ ಸಮಾಜದ ಮೇಲೆ ಧಾರ್ಮಿಕ-ಮತೀಯ ಶಕ್ತಿಗಳ ಹಿಡಿತ ಬಿಗಿಯಾಗುತ್ತಿರುವುದು. ಪುರಾಣ, ಇತಿಹಾಸ ಮತ್ತು ವರ್ತಮಾನದ ಯಾವುದೇ ವಾಸ್ತವತೆಗಳನ್ನು ಬಿಂಬಿಸುವ ಪ್ರಯತ್ನಗಳಿಗೆ ಮತಾಂಧರು, ಮತೀಯವಾದಿಗಳು ಸದಾ ಕಣ್ಗಾವಲಾಗಿರುತ್ತಾರೆ. ಮತಾಂಧ ಪಡೆಗಳಿಂದ ಯಾವ ಹೊತ್ತಿನಲ್ಲಾದರೂ ದಾಳಿಗೊಳಗಾಗುವ ಭೀತಿಯಲ್ಲೇ ಮಾಧ್ಯಮಗಳು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬದಿಗೊತ್ತಿ ಅನುಕೂಲಕರ ಪರಿಭಾಷೆಯನ್ನು ಬೆಳೆಸಿಕೊಳ್ಳುತ್ತಿವೆ.

ಒಳಗೊಳ್ಳುವಿಕೆಯ ಮಾರ್ಗಗಳು
ಭಿನ್ನಮತ ಅಥವಾ ಭಿನ್ನಾಭಿಪ್ರಾಯವನ್ನು ಸಹಿಸಿಕೊಂಡು ಸಹಬಾಳ್ವೆ ನಡೆಸುವಂತಹ ಒಂದು ಮುಕ್ತ ವಾತಾವರಣವನ್ನು ಭಾರತೀಯ ಸಮಾಜ ಕಳೆದುಕೊಂಡಿರುವುದರಿಂದಲೇ ಮಾಧ್ಯಮಾಭಿವ್ಯಕ್ತಿಯೂ ಸಾಪೇಕ್ಷವಾಗುತ್ತಿದೆ. ಪರ-ವಿರೋಧ ಎನ್ನುವ ಸಂವಾದ ಸಂಸ್ಕೃತಿಯನ್ನು ಎಂದೋ ಕಳೆದುಕೊಂಡಿರುವ ನವ ಭಾರತದ ಬೌದ್ಧಿಕ ಸಮಾಜ ಎಲ್ಲವನ್ನೂ ಮಿತ್ರ-ಶತ್ರು ಎನ್ನುವ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಿದೆ. ತತ್ಪರಿಣಾಮವಾಗಿ ಭಾರತದ ಬಹುತ್ವ ಸಂಸ್ಕೃತಿಯ ಮೂಲ ಸೆಲೆ ಎನ್ನಬಹುದಾದ ʼ ಒಳಗೊಳ್ಳುವಿಕೆ ʼ (Inclusiveness) ಹಂತಹಂತವಾಗಿ ಶಿಥಿಲವಾಗುತ್ತಲೇ ಇದೆ. ಈ ಒಳಗೊಳ್ಳುವಿಕೆಯನ್ನು ತಳಮಟ್ಟದ ಸಮಾಜದವರೆಗೂ ವಿಸ್ತರಿಸಿ, ವ್ಯಾಪಿಸುವ ಬಹುದೊಡ್ಡ ಜವಾಬ್ದಾರಿ ಇರುವ ಮಾಧ್ಯಮ ವಲಯ ಮಾರುಕಟ್ಟೆಯ ಆಧಿಪತ್ಯಕ್ಕೊಳಗಾಗಿ ವಾಸ್ತವಕ್ಕೆ ವಿಮುಖವಾಗುತ್ತಿದೆ. ಈ ಮುಖ್ಯವಾಹಿನಿ ಪ್ರವಾಹಕ್ಕೆ ಮುಖಾಮುಖಿಯಾಗಿ ಧಿಕ್ಕರಿಸಿ ನಡೆವ ಮಾಧ್ಯಮ ಧ್ವನಿಗಳನ್ನು ಆಳ್ವಿಕೆಯ ಸಂಸ್ಥೆಗಳು ನಿಶ್ಶಬ್ದವಾಗಿಸುತ್ತವೆ.

ಈ ಸಂದರ್ಭದಲ್ಲಿ ಸಮಾಜಮುಖಿ ಪರ್ಯಾಯವಾಗಿ ರೂಪುಗೊಳ್ಳುತ್ತಿರುವ ಖಾಸಗಿ ವಿದ್ಯುನ್ಮಾನ ತಾಣಗಳು, ಕೆಲವು ಮುದ್ರಣ ಮಾಧ್ಯಮಗಳು ಏಕಮುಖಿ ಅಭಿವ್ಯಕ್ತಿಗೆ ಬಲಿಯಾಗದೆ, ಮುಕ್ತ ಸಂವಾದಕ್ಕೆ ಎಡೆಮಾಡಿಕೊಡುವ ಸಾರ್ವಜನಿಕ ವೇದಿಕೆಗಳಾಗಿ ಕಾರ್ಯನಿರ್ವಹಿಸಬೇಕಿದೆ. ಆಳ್ವಿಕೆಯನ್ನು ವಿರೋಧಿಸುವುದು ಅಥವಾ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸುವುದು ಪತ್ರಿಕೋದ್ಯಮದ ಅಥವಾ ಮಾಧ್ಯಮ ವಲಯದ ಒಂದು ಆಯಾಮ ಮಾತ್ರ. ಇದರೊಟ್ಟಿಗೇ ತಳಮಟ್ಟದ ಸಾಮಾನ್ಯ ಜನತೆಗೆ, ಅವಕಾಶವಂಚಿತ ಜನತೆಗೆ ವರ್ತಮಾನ ಸಮಾಜದ ವಸ್ತುಸ್ಥಿತಿಯನ್ನು ಮನದಟ್ಟುಮಾಡುವುದೂ ಮುಖ್ಯವಾಗುತ್ತದೆ. ಇತಿಹಾಸದೊಂದಿಗೆ ಅನುಸಂಧಾನ ಮಾಡುತ್ತಾ, ವರ್ತಮಾನಕ್ಕೆ ಮುಖಾಮುಖಿಯಾಗುತ್ತಾ ಭವಿಷ್ಯದ ಮಾರ್ಗಗಳಿಗೆ ತೊಡಕುಂಟುಮಾಡುವ ತಾತ್ವಿಕ ಆಲೋಚನೆಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿ, ಸಮನ್ವಯದ ಪರಿಭಾಷೆಯ ಮೂಲಕ ಯುವ ಸಮೂಹಕ್ಕೆ ತಲುಪಿಸುವ ದೊಡ್ಡ ಜವಾಬ್ದಾರಿ ಪರ್ಯಾಯ ಮಾಧ್ಯಮಗಳ ಮೇಲಿದೆ. ಖಂಡನೆ ಮತ್ತು ವಿಮರ್ಶೆಗಳು ತಮ್ಮ ವಸ್ತುನಿಷ್ಠತೆಯನ್ನು ಕಳೆದುಕೊಂಡಾಗ ಅಲ್ಲಿ ಏಕಸಂಸ್ಕೃತಿಯ ಪ್ರಭಾವ ಮೇಲುಗೈ ಸಾಧಿಸುತ್ತದೆ. ಅಲ್ಲಿಯೂ ಸಹ ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಬಲವಾಗಿರುವ ವರ್ಗಗಳೇ ತಮ್ಮ ಆಧಿಪತ್ಯ ಸಾಧಿಸುತ್ತವೆ. ಇಂತಹ ಸನ್ನಿವೇಶದಲ್ಲೂ ಮಾಧ್ಯಮ ಸ್ವಾತಂತ್ರ್ಯ ಮರೀಚಿಕೆಯಾಗೇ ಉಳಿಯುತ್ತದೆ. ಈ ಎಚ್ಚರವೂ ನಮ್ಮಲ್ಲಿರಬೇಕು.
ಈ ಅಪಾಯವನ್ನು ಇಂದಿನ ಯುವ ಜಗತ್ತು ಗಂಭೀರವಾಗಿ ಪರಿಗಣಿಸಬೇಕಿದೆ. ತತ್ವ ಸಿದ್ಧಾಂತಗಳು ಸಾಮಾಜಿಕ ಬೆಳವಣಿಗೆಯನ್ನು, ಸಾಂಸ್ಕೃತಿಕ ಆಲೋಚನೆಗಳನ್ನು, ಭೌತಿಕ ಚಲನೆಯನ್ನು ನಿರ್ದೇಶಿಸುತ್ತವೆ. ಒಂದು ಆರೋಗ್ಯಕರ ಸಮಾಜವನ್ನು ಕಟ್ಟಲು ಪರಿಕರಗಳಾಗಿ ನೆರವಾಗುತ್ತವೆ. ಈ ಪರಿಕರಗಳನ್ನೇ ಬೌದ್ಧಿಕ ಸಲಕರಣೆಗಳನ್ನಾಗಿ ಬಳಸಿಕೊಂಡು ಸಮನ್ವಯದ ನೆಲೆಗಳನ್ನು ಭದ್ರಗೊಳಿಸಿ, ಸೌಹಾರ್ದಯುತ ಸಮಾಜವನ್ನು ಕಟ್ಟುವುದು ವರ್ತಮಾನ ಭಾರತದ ಯುವಸಮೂಹದ ಆದ್ಯತೆಯಾಗಬೇಕಿದೆ. ಇದಕ್ಕೆ ಅಡ್ಡಿಯಾಗಬಹುದಾದ ಯಾವುದೇ ಪ್ರಾಚೀನ ಆಲೋಚನೆಗಳಿಗೆ ಬಲಿಯಾಗದೆ, ಆಧುನಿಕತೆಯತ್ತ ಸಾಗುವ ಒಂದು ಮಾರ್ಗವನ್ನು ಹಿರಿಯ ತಲೆಮಾರಿನ ಬೌದ್ಧಿಕ ವಲಯ ರೂಪಿಸಬೇಕಿದೆ. ನಿರಾಕರಣೆಯ ಮಾರ್ಗವನ್ನು ತೊರೆದು, ಪರಾಮರ್ಶೆ-ಆತ್ಮಾವಲೋಕನದ ಮಾರ್ಗವನ್ನು ಅನುಸರಿಸುವ ಮೂಲಕ ಇಡೀ ಸಮಾಜವನ್ನು ಒಳಗೊಳ್ಳುವಿಕೆಯತ್ತ ಕೊಂಡೊಯ್ಯಲು ಸಾಧ್ಯವಿದೆ.
ಈ ದೃಷ್ಟಿಯಿಂದ ಮಾಧ್ಯಮ ಸ್ವಾತಂತ್ರ್ಯ ಬಹಳ ಮುಖ್ಯವಾಗುತ್ತದೆ. ವ್ಯಕ್ತಿಗತ-ಸಾಂಸ್ಥಿಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾನ್ಯ ಮಾಡದ ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲೂ ಮಾಧ್ಯಮ ಸ್ವಾತಂತ್ರ್ಯ ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಸಮಾಜಕ್ಕೆ ಮನದಟ್ಟುಮಾಡಬೇಕಿದೆ . ಸಂವಿಧಾನ ಬಯಸುವ “ಒಳಗೊಳ್ಳುವಿಕೆ”ಯನ್ನು ಸಾಧಿಸಬೇಕಾದರೆ ಭಿನ್ನಮತದೊಂದಿಗೆ ಬಾಳ್ವೆ ನಡೆಸುವ ವ್ಯವಧಾನವನ್ನು ಸಮಾಜ ಬೆಳೆಸಿಕೊಳ್ಳಬೇಕಿದೆ. ಪ್ರಸ್ತುತ ವಾತಾವರಣದಲ್ಲಿ ಪ್ರಗತಿಪರ-ಎಡಪಂಥೀಯ-ಪ್ರಜಾಸತ್ತಾತ್ಮಕ ಸಮುದಾಯಗಳಲ್ಲೂ ಈ ವ್ಯವಧಾನದ ಕೊರತೆ ಕಾಣುತ್ತಿರುವುದನ್ನು ಮನಗಂಡು ಮಾಧ್ಯಮಾಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಮರುಸ್ಥಾಪಿಸುವತ್ತ ಸಾಗಬೇಕಿದೆ. ನಾವು ಕಾಪಾಡಬೇಕಿರುವುದು ಕೇವಲ ಸ್ಥಾಪಿತ-ಸಾಂಸ್ಥಿಕ ಮಾಧ್ಯಮ ಸ್ವಾತಂತ್ರ್ಯವನ್ನಲ್ಲ, ಪ್ರಚಲಿತ ಸಂವಹನ ಮಾಧ್ಯಮ ಸ್ವಾತಂತ್ರ್ಯವನ್ನೂ ರಕ್ಷಿಸಬೇಕಿದೆ. ಇದು ನಾಗರಿಕ ಸಮಾಜದ ಮುಂದಿರುವ ದೊಡ್ಡ ಸವಾಲು.
-೦-೦-೦-೦-

Previous Post

ಅರವಿಂದ ಕೇಜ್ರಿವಾಲ್ ಜೈಲಿಂದ ರಿಲೀಸ್..! ಜೈಲಿನ ಹೊರಗಡೆ ಏನಾಯ್ತು..?

Next Post

ಎಸ್ ಎಸ್ ಎಲ್ ಸಿ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಕರೆ ಮಾಡಿ ಶುಭ ಹಾರೈಸಿದ ಡಿಸಿಎಂ ಡಿ ಕೆ ಶಿವಕುಮಾರ್

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post

ಎಸ್ ಎಸ್ ಎಲ್ ಸಿ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಕರೆ ಮಾಡಿ ಶುಭ ಹಾರೈಸಿದ ಡಿಸಿಎಂ ಡಿ ಕೆ ಶಿವಕುಮಾರ್

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada