ಮೇಕೆದಾಟು ಯೋಜನೆಯ ವಿಚಾರವಾಗಿ ರಾಜ್ಯದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ವಾಕ್ ಸಮರ, ಕಾನೂನು ಸಮರ, ಆರೋಪ ಪ್ರತ್ಯಾರೋಪ ಎಲ್ಲವೂ ನಡೆಯಿತು. ಬಳಿಕ ಅದಕ್ಕೆ ತಾತ್ಕಾಲಿಕ ವಿರಾಮವೂ ಬಿದ್ದಿತು. ಆದರೆ ಈ ಯೋಜನೆಯ ಬಗ್ಗೆ ಮಾಜಿ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹಾಗೂ ಹಾಲಿ ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ನಡುವೆ ನಡೆಯುತ್ತಿದ್ದ ವಾಕ್ ಇದೀಗ ಸಮುದಾಯಗಳ ನಡುವಿನ ವಾಕ್ ಸಮರಕ್ಕೆ ಬಂದು ನಿಂತಿದೆ. ಸಮಾನತೆ ಬೋಧಿಸಿದ ಬಸವಣ್ಣನ ನಾಡಿನಲ್ಲಿ ಇಬ್ಬರ ನಡುವೆ ಜಾತಿ ಜಾತಿಗಳ ಮಾತಿನ ಭರಾಟೆ ನಡೆದಿದ್ದು, ಇದು ಸಮಾಜದ ಸಾಮರಸ್ಯವನ್ನು ಕೆಡಿಸುವ ಹಂತಕ್ಕೆ ತಲುಪಿದೆ.
ಕಳೆದ ವಾರ ಮಾಜಿ ಸಚಿವ ಎಂಬಿ ಪಾಟೀಲ್ ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡುವ ಭರದಲ್ಲಿ ಸಚಿವ ಗೋವಿಂದ್ ಕಾರಜೋಳ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡಿದ್ದಾರೆ ಎಂದು ಇಬ್ಬರು ನಾಯಕರು ಆರೋಪ ಪ್ರತ್ಯಾರೋಪ ಮಾಡುತ್ತಾ ಸುಮ್ಮನಾಗಿದ್ದರು. ಆದರೆ ದಿನ ಕಳೆದಂತೆ ಇಬ್ಬರು ನಾಯಕರ ಬೆಂಬಲಿಗರು ಆರೋಪ, ಪ್ರತ್ಯಾರೋಪ ಮುಂದುವರೆಸಿ ಇದೀಗ ದಲಿತ ಹಾಗೂ ಲಿಂಗಾಯತ ಸಮುದಾಯದ ನಡುವೆ ಕಂದಕ ಉಂಟು ಮಾಡುವ ಮಟ್ಟಕ್ಕೆ ತಂದಿಟ್ಟಿದ್ದಾರೆ. ಎಂಬಿ ಪಾಟೀಲ್ ಅವರು ಗೋವಿಂದ ಕಾರಜೋಳ ಅವರ ವಿರುದ್ಧ ಅಸಂಬದ್ಧ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಕಾರಜೋಳ್ ಬೆಂಬಲಿಗರು ಹಾಗೂ ಅವರ ಸಮುದಾಯದ ಮುಖಂಡರು ಪ್ರತಿಭಟನೆಯ ಹಾದಿ ಹಿಡಿದರು. ವಿಜಯಪುರದಲ್ಲಿರುವ ಎಂಬಿ ಪಾಟೀಲ್ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಂಬಿ ಪಾಟೀಲ್ ಬೆಂಬಲಿಗರು ಕಾರಜೋಳ ಹಾಗು ಅವರ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತ್ಯುತ್ತರ ನೀಡಿದ್ದರು. ಇಷ್ಟಕ್ಕೆ ಎಲ್ಲ ಮುಗಿದು ಹೋಯಿತು ಎನ್ನುವಾಗಲೇ ಎಂಬಿ ಪಾಟೀಲ್ ವಿರುದ್ಧ ವಿಜಯಪುರ ಜಿಲ್ಲೆಯ ಬಬಲೇಶ್ವರ, ತಿಕೋಟಾ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ದೂರು ನೀಡಿದ್ದಾರೆ. ಗೋವಿಂದ ಕಾರಜೋಳ ಬೆಂಬಲಿಗರು ದೂರು ನೀಡಿದ್ದೇ ತಡ, ಎಂಬಿ ಪಾಟೀಲ್ ಪರವಾಗಿ ಲಿಂಗಾಯತ ಸಮುದಾಯ ಸೇರಿದಂತೆ ವಿವಿಧ ಸಮುದಾಯದ ನಾಯಕರು ಬೆನ್ನಿಗೆ ನಿಂತಿದ್ದಾರೆ.
ವಿಜಯಪುರದ ಕಿತ್ತೂರು ರಾಣಿ ಚೆನ್ನಮ್ಮ ಸಭಾ ಭವನದಲ್ಲಿ ಬೃಹತ್ ಸಭೆ ಮಾಡಿ, ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಸಹಜ. ಆದರೆ ಅದಕ್ಕೆ ಜಾತಿ ಬಣ್ಣ ಹಚ್ವಬಾರದಿತ್ತು ಎಂದು ಎಂಬಿ ಪಾಟೀಲ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಡೀ ಪ್ರಕರಣ ಇದೀಗ ಎರಡು ಜಾತಿಗಳ ನಡುವೆ ಕಂದಕ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿದೆ.
ಯಾರಿಗೆ ನಷ್ಟ ಯಾರಿಗೆ ಲಾಭ
ಮಾಜಿ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹಾಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನಡುವಿನ ಗಲಾಟೆ ವಿಜಯಪುರ ಭಾಗಲಕೋಟೆ ಜಿಲ್ಲೆಯ ರಾಜಕಾರಣ ಮೇಲೆ ಪರಿಣಾಮ ಬೀರಲಿದೆ. ಇಬ್ಬರು ನಾಯಕರು ಜಿಲ್ಲೆಯಲ್ಲಿ ತಮ್ಮದೆಯಾದ ಪ್ರಭಾವ ಹೊಂದಿದ್ದಾರೆ. ಇಬ್ಬರೂ ಕೂಡಾ ಪ್ರಬಲ ಸಮುದಾಯ ನಾಯಕರಾಗಿದ್ದಾರೆ. ಹೀಗಾಗಿ ಮೇಕೆದಾಟು ಯೋಜನೆಯ ವಿಚಾರವಾಗಿ ಆರಂಭವಾದ ಗಲಾಟೆ ಯಾರಿಗೆ ಲಾಭ ತರಲಿದೆ, ಯಾರಿಗೆ ಹಾನಿ ಮಾಡಲಿದೆ ಎಂಬ ಲೆಕ್ಕಾಚಾರ ಜೋರಾಗಿದೆ. ಆದರೆ ವಾಸ್ತವವಾಗಿ ಇದು ಇಬ್ಬರಿಗೂ ಹಾನಿ ಮಾಡಲಿದೆ ಅನ್ನೋದು ಅಷ್ಟೇ ಸತ್ಯ.
ಯಾವುದೇ ರಾಜಕಾರಣಿ ಜನರಿಂದ ಮತಗಳನ್ನ ಪಡೆಯುವ ಕಾರಣ ಯಾವುದೇ ಸಮುದಾಯದ ವಿರೋಧ ಕಟ್ಟಿಕೊಳ್ಳಲು ಮುಂದಾಗಲ್ಲ. ಎಲ್ಲ ಸಮಾಜದ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ಎಂಬಿ ಪಾಟೀಲ್ ಹಾಗೂ ಗೋವಿಂದ್ ಕಾರಜೋಳ ಕೂಡಾ ಇದೇ ರೀತಿ ಎಲ್ಲ ಸಮುದಾಯದ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಆದರೆ ಮೇಕೆದಾಟು ವಿಚಾರವಾಗಿ ನಡೆದ ಆರೋಪ ಪ್ರತ್ಯಾರೋಪ ಇಬ್ಬರು ನಾಯಕರು ಒಂದೊಂದು ಸಮಾಜದ ವಿರೋಧ ಕಟ್ಟಿಕೊಳ್ಳುವಂತೆ ಮಾಡುತ್ತಿದೆ. ಎಂಬಿ ಪಾಟೀಲ್ ವಿರುದ್ಧ ಗೋವಿಂದ್ ಕಾರಜೋಳ ಅವರ ಸಮುದಾಯ (ದಲಿತ ಎಡಗೈ) ಆಕ್ರೋಶ ವ್ಯಕ್ತಪಡಿಸಿದರೆ, ಎಂ ಬಿ ಪಾಟೀಲ್ ಅವರ ಬೆಂಬಲಿಕ್ಕೆ ನಿಂತಿರುವ ಲಿಂಗಾಯತ ಸಮಾಜ ಗೋವಿಂದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ ಇದು ಇಬ್ಬರು ನಾಯಕರಿಗೆ ನಷ್ಟ ಉಂಟು ಮಾಡಲಿದ್ದು, ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗ ಇಂತಹ ಘಟನೆಗಳು ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆಯಾಗಿವೆ.