ಅಮೆಜಾನ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಮತ್ತು ಬ್ಯಾಂಕರ್ ಅರುಂಧತಿ ಭಟ್ಟಾಚಾರ್ಯ ಅವರೊಂದಿಗೆ ಆಶಾ ಕಾರ್ಯಕರ್ತೆ ಮಟಿಲ್ಡಾ ಕುಲು ‘ಫೋರ್ಬ್ಸ್ ಇಂಡಿಯಾ ಡಬ್ಲ್ಯೂ-ಪವರ್ (ವುಮನ್ ಪವರ್) 2021’ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಒಡಿಶಾದ ಸುಂದರ್ಗಢ್ ಜಿಲ್ಲೆಯ ಗರ್ಗಡ್ಬಹಾಲ್ ಗ್ರಾಮದ ತನ್ನ ಮನೆಯಿಂದ ಹೊರಗೆ ಹೋಗುವಾಗ 45 ವರ್ಷದ ಆಶಾ ಕಾರ್ಯಕರ್ತೆ ಮಟಿಲ್ಡಾ ಕುಲು ಮೊದಲು ತನ್ನ ಬ್ಯಾಗ್ ಮತ್ತು ಸೈಕಲ್ ಅನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಅಂದವಾಗಿ ಪಿನ್ ಮಾಡಿದ ನೀಲಿ ಸೀರೆ ಧರಿಸಿ, ಕುಲು ಸೈಕಲ್ನ ಚಕ್ರಗಳನ್ನು ಪರಿಶೀಲಿಸಿ, ಅಗತ್ಯವಿರುವ ಔಷಧಿಗಳು, ಕೋವಿಡ್ ಕಿಟ್ಗಳು ಮತ್ತು ದಾಖಲೆ ಬರೆದುಕೊಳ್ಳುವ ಸಾಮಗ್ರಿಗಳನ್ನು ತನ್ನ ಬ್ಯಾಗ್ನಲ್ಲಿ ಇರಿಸುತ್ತಾರೆ. ನಂತರ ಸುಮಾರು 250 ಮನೆಗಳನ್ನು ಸಂದರ್ಶಿಸಿ ಬಡ ಜನರ ಆರೋಗ್ಯವನ್ನು ವಿಚಾರಿಸಿ, ಅಗತ್ಯವಿದ್ದವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ.ಇದು ಇವರ ನಿತ್ಯದ ಕಾಯಕವಾಗಿದೆ.
ದೇಶದ ಎಲ್ಲ ಆಶಾ ಕಾರ್ಕರ್ತೆಯರು ಇದೇ ದಿನಚರಿ ಅನುಸರಿಸುವಾಗ, ಕುಲು ಅವರ ಕೆಲಸದಲ್ಲೇನೂ ವಿಶೇಷ ಅನಿಸಬಹುದು. ಕುಲು ತನ್ನ ಪ್ರದೇಶದಲ್ಲಿ ಹರಡಿದ ಕೋವಿಡ್ ವಿರುದ್ಧವಷ್ಟೇ ಅಲ್ಲದೇ, ಜಾತೀಯತೆ ಮತ್ತು ಮೂಢನಂಬಿಕೆಗಳ ವಿರುದ್ಧವೂ ಹೋರಾಡಿ ಜನರ ವಿಶ್ವಾಸ ಗಳಿಸುವಲ್ಲಿ ಸಫಲರಾಗಿದ್ದಾರೆ.
ಕಳೆದ 15 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿರುವ ಕುಲು, ಅಮೆಜಾನ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಮತ್ತು ಬ್ಯಾಂಕರ್ ಅರುಂಧತಿ ಭಟ್ಟಾಚಾರ್ಯ ಅವರೊಂದಿಗೆ ‘ಫೋರ್ಬ್ಸ್ ಇಂಡಿಯಾ ಡಬ್ಲ್ಯೂ-ಪವರ್ 2021’ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯೊಬ್ಬರು ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ದೇಶದಲ್ಲಿ ಇದೇ ಮೊದಲು.
ಕುಲು ಅವರ ಹಾದಿಯು ಸುಲಭವಾಗಿರಲಿಲ್ಲ. ಅವರು ಜಾತಿಪದ್ಧತಿ, ಮೂಢನಂಬಿಕೆಗಳ ವಿರುದ್ಧ ಹೇಗೆ ಹೋರಾಡಬೇಕಾಯಿತು ಮತ್ತು ತಿನ್ನಲು ಯಾವುದೇ ಆಹಾರ ಸಿಗದ ದಿನಗಳನ್ನು ಹೇಗೆ ಎದುರಿಸಿದೆ ಎಂದು ನೆನಪಿಸಿಕೊಂಡಿದ್ದು ಹೀಗೆ; “ಕೆಲವೊಮ್ಮೆ ನಾನು ಅವರ ಮನೆಗೆ ಹೋಗಿದ್ದರಿಂದ ಅವರು ಅನಾರೋಗ್ಯಕ್ಕೆ ಒಳಗಾಗಲು ನಾನೇ ಕಾರಣ ಎಂದು ಜನರು ಭಾವಿಸುತ್ತಾರೆ. ಅವರ ಮೂಢನಂಬಿಕೆಗಳು ಅಷ್ಟೊಂದು ಪ್ರಮಾಣದಲ್ಲಿತ್ತು” ಎಂದು ಖರಿಯಾ ಬುಡಕಟ್ಟಿಗೆ ಸೇರಿದ ಕುಲು ಹೇಳುತ್ತಾರೆ.
ಈಗ ಜನರಿಗೆ ಜ್ಞಾನವನ್ನು ನೀಡುವುದರ ಮೇಲೆ ಅವರ ಗಮನವನ್ನು ಕೇಂದ್ರೀಕರಿಸಿದ್ದಾರೆ. ಅವರ ವ್ಯಾಪ್ತಿಗೆ ಬರುವ ಸಂಪೂರ್ಣ ಪ್ರದೇಶದ ಎಲ್ಲ ವಯಸ್ಕರಿಗೂ ಕೋವಿಡ್ ವಿರುದ್ಧ ಸಂಪೂರ್ಣವಾಗಿ ಲಸಿಕೆ ಒದಗುವಂತೆ ಮಾಡಿದ್ದನ್ನು ಹೆಮ್ಮೆಯಿಂದ ಅವರು ಹೇಳುತ್ತಾರೆ.
ಗರ್ಭಿಣಿ ಮತ್ತು ತಾಯಂದಿರ ತಪಾಸಣೆ, ಮಲೇರಿಯಾ ಪರೀಕ್ಷೆ, ನೈರ್ಮಲ್ಯ ಮತ್ತು ಗರ್ಭನಿರೋಧಕಗಳ ಕುರಿತು ಮಹಿಳೆಯರಿಗೆ ಸಲಹೆ ನೀಡುವುದು, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಭೆಗಳನ್ನು ನಡೆಸುವುದು ಮತ್ತು ಕೋವಿಡ್ ರೋಗಲಕ್ಷಣಗಳ ಪತ್ತೆಗಾಗಿ ಮತ್ತು ಲಸಿಕೆಗಳಿಗಾಗಿ ಮನೆಗಳಿಗೆ ಭೇಟಿ ನೀಡುವುದು ಅವರ ನಿತ್ಯದ ಕಾರ್ಯವಾಗಿದೆ.
ಆಶಾ ಕಾರ್ಯಕರ್ತೆಯಾಗುವ ಮೊದಲು ಕುಲು ಅವರು ಹೊಲಿಗೆ ಅಂಗಡಿಯನ್ನು ನಡೆಸುತ್ತಿದ್ದರು. ಅವರು ತಮ್ಮ ಹಳ್ಳಿಯ ಸ್ವಸಹಾಯ ಗುಂಪಿನ ಮೂಲಕ ಆಶಾ ಯೋಜನೆ ಬಗ್ಗೆ ತಿಳಿದುಕೊಂಡರು.”ಐದು ಮಕ್ಕಳಲ್ಲಿ ನಾನು ಕಿರಿಯವಳು. ತನ್ನ ಹೆತ್ತವರಿಂದ ಬಹಳಷ್ಟು ಪ್ರೀತಿಯನ್ನು ಪಡೆದಿದ್ದೇನೆ. ಜೊತೆಗೆ ಸಮಾಜದಲ್ಲಿ ಅನುಭವಿಸಿದ ಕಷ್ಟಗಳನ್ನು ನಾನು ಮರೆತಿಲ್ಲ. ಹೆತ್ತವರಿಗೆ ತಿನ್ನಲು ಆಹಾರವಿಲ್ಲದ ಸಂದರ್ಭಗಳು ಎದುರಾಗಿವೆ. ನಾನು ಹುಟ್ಟುವ ಹೊತ್ತಿಗೆ ಪರಿಸ್ಥಿತಿ ಉತ್ತಮವಾಗಿತ್ತು,” ಕುಟುಂಬದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.
ಕುಲು ಅವರು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಹಲವಾರು ತೊಂದರೆಗಳನ್ನು ಎದುರಿಸಿದ್ದಾರೆ. ತನ್ನ ಕ್ಷೇತ್ರ ಭೇಟಿಗಳ ಸಮಯದಲ್ಲಿ, ಜನರು ಕೆಲವೊಮ್ಮೆ ಆಕೆಗೆ ನೀರು ಕುಡಿಯಲು ಗಾಜಿನ ಬಟ್ಟಲು ನೀಡುತ್ತಿದ್ದರು ಮತ್ತು ನಂತರ ಅದನ್ನು ಸ್ಪರ್ಶಿಸಲು ನಿರಾಕರಿಸುತ್ತಿದ್ದರು. ಈಗ ನಾನು ಹೋದಾಗ ಎಲ್ಲರೂ ನನ್ನೊಂದಿಗೆ ಕುಳಿತು ಊಟ ಮಾಡುತ್ತಾರೆ ಮತ್ತು ಚಹಾ ಸೇವಿಸುತ್ತಾರೆ,” ಎಂದು ಕುಲು ನಗುತ್ತಾ ಹೇಳುತ್ತಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದು ಕುಲುಗೆ ಸವಾಲಾಗಿತ್ತು. ಏಕೆಂದರೆ ಅನೇಕ ಗ್ರಾಮಸ್ಥರು ಆರಂಭದಲ್ಲಿ ಕೋವಿಡ್ ಅನ್ನು “ವಂಚನೆ” ಎಂದು ಭಾವಿಸಿದ್ದರು ಮತ್ತು ಲಸಿಕೆ ಹಾಕಿದರೆ ತಾವು ಸಾಯುತ್ತೇವೆ ಎಂದು ಭಯಪಟ್ಟಿದ್ದರು. ಆದರೆ, ತಾಳ್ಮೆ ಮತ್ತು ಮಾರ್ಗದರ್ಶನದ ಮೂಲಕ, ಕುಲು ತನ್ನ ಹಳ್ಳಿಯ ಜನರನ್ನು ಪರೀಕ್ಷಿಸಲು, ಪ್ರತ್ಯೇಕಿಸಲು (ಕೋವಿಡ್ ಪಾಸಿಟಿವ್ ಆಗಿದ್ದರೆ) ಮತ್ತು ಲಸಿಕೆಯನ್ನು ಪಡೆಯಲು ಮನವೊಲಿಸಲು ಸಾಧ್ಯವಾಯಿತು ಎನ್ನುತ್ತಾರೆ ಕುಲು.
“ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಮೇಲೆ ಆಶಾ ಕಾರ್ಯಕರ್ತೆಯಾಗಿ ಗುರುತಿಸಲ್ಪಡುತ್ತಿರುವುದಕ್ಕೆ ಸಂತೋಷವಾಗಿದೆ. ನಾನು ಜನರಿಗೆ ಸಹಾಯ ಮಾಡಲು ಇಷ್ಟಪಡುತ್ತೇನೆ. ಅವರ ಆರೋಗ್ಯ ಮತ್ತು ಸಂತೋಷವನ್ನು ನೋಡಿದಾಗ ನನಗೆ ತೃಪ್ತಿಯಾಗುತ್ತದೆ. ನನ್ನ ಸ್ವಂತ ನೋವನ್ನು ನುಂಗಿಕೊಳ್ಳುತ್ತೇನೆ” ಎಂದಿದ್ದಾರೆ.
ಒಟ್ಟಾರೆ ಆದಿವಾಸಿ ಮಹಿಳೆಯೊಬ್ಬರು ಜಾತೀಯತೆ, ಕೋವಿಡ್ ಮತ್ತು ಮೂಢ ನಂಬಿಕೆಗಳ ವಿರುದ್ಧ ಜಯ ಸಾಧಿಸಿ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಎಲ್ಲ ಆಶಾ ಅಕ್ಕಂದಿರಿಗೆ ಮತ್ತು ತುಳಿತಕ್ಕೆ ಒಳಗಾದ ಸಮುದಾಯದಿಂದ ಬಂದು ಗೆಲ್ಲುವ ಎಲ್ಲ ಮಹಿಳೆಯರಿಗೆ ಸಿಕ್ಕ ಗೆಲುವು ಎಂದೇ ಹೇಳಬಹುದು.