ಕಲಬುರಗಿ: ನಗರ ಹೊರವಲಯದ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಆವರಣದಲ್ಲಿ ಸಸ್ಯ ಸಂಪತ್ತು, ಗಿಡ ಮರಗಳು ನಾಶವಾಗಿ ಪ್ರಾಣಿ–ಪಕ್ಷಿಗಳು ಸುಟ್ಟು ಭಸ್ಮವಾಗಿವೆ.
ಆವರಣದಲ್ಲಿ ಮೊಣಕಾಲುದ್ದ ಬೆಳೆದಿರುವ ಹುಲ್ಲಿನ ನಡುವೆ ಹುಳು ಹುಪ್ಪಟಗಳು, ಕಪ್ಪೆಗಳು, ಹಾವುಗಳು, ಓತಿಕೇತ, ಮಿಡತೆಗಳು, ಚಿಟ್ಟೆಗಳು, ನೆಲದೊಳಗೆ ಇರುವೆಗಳು, ಗೆದ್ದಲು ಗೂಡು ಕಟ್ಟಿವೆ. ಇವೆಲ್ಲವೂ ಬೆಂಕಿಗೆ ಆಹುತಿಯಾಗಿವೆ.

ಸಿಯುಕೆ ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ ಮಾತನಾಡಿ, ವಿಶ್ವವಿದ್ಯಾಲಯ ಆವರಣದ ಎಸ್‌ಟಿಪಿ, ಪಿಬಿಸಿ ವಸತಿ ಮತ್ತು ಕೆರೆ ಸಮೀಪದ ಒಣ ಹುಲ್ಲಿಗೆ ಸೋಮವಾರ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಉದ್ದೇಶ ಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ಬೆಂಕಿ ಹಚ್ಚಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಇಂತಹ ಕೃತ್ಯ ನಡೆಯುತ್ತಿವೆ ಎಂದು ತಿಳಿಸಿದರು.
ಈ ವರ್ಷ ಜೆಸಿಬಿ, ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಒಣಹುಲ್ಲು ಕತ್ತರಿಸಲಾಗುತ್ತಿದೆ. ಆದರೆ, ಕೆಲವು ಕಿಡಿಗೇಡಿಗಳು ಮೂರು ದಿನಗಳಿಂದ ಬೆಂಕಿ ಹಚ್ಚುತ್ತಿದ್ದು, ನೀರಿನ ಟ್ಯಾಂಕರ್ ತರಿಸಿ ಬೆಂಕಿ ನಂದಿಸಲಾಗುತ್ತಿದೆ. ಸೋಮವಾರ ಏಕಕಾಲದಲ್ಲಿ ಮೂರು ಕಡೆ ಬೆಂಕಿಹಚ್ಚಿದರಿಂದ ಬೆಂಕಿಯ ಕೆನ್ನಾಲಿಗೆ 4–5 ಅಡಿ ಎತ್ತರ ಚಾಚಿಕೊಂಡಿದೆ. ಇದರಿಂದ ಸೋಲಾರ್ ಪ್ಲಾಂಟ್, ಕಾಂಪೌಂಡ್, ಎಸ್’ಟಿಪಿ, ಪಿಬಿಸಿ ವಸತಿ, ಕೆರೆ ಸಮೀಪದ ಮರಗಳು ಸುಟ್ಟಿವೆ. ಪ್ರಾಣಿ– ಪಕ್ಷಿಗಳು ಸುಟ್ಟು ಭಸ್ಮವಾಗಿರುವ ಸಾಧ್ಯತೆ ಇದೆ. ತಕ್ಷಣವೇ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.












