ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆ ವಿರುದ್ಧ ರೈತರು ಒಂದು ವರ್ಷ ಪ್ರತಿಭಟಿಸಿ, ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದರು. ಆ ಹಾದಿಯಲ್ಲೇ ಕಾರ್ಮಿಕ ಸಂಘಟನೆಗಳು ಸಹ ತಮ್ಮ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರ ತ್ವರಿತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ʻಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿʼ (MASA- Mazdoor Adhikar Sangharsha Abhiyan) ಉದ್ದೇಶಿಸಿದೆ. ಅದರ ರೂಪುರೇಷೆ ಮತ್ತು ಸಿದ್ದತೆಗಳಿಗಾಗಿ ಭಾನುವಾರ ನಗರದ ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ಕಾರ್ಮಿಕ ಸಂಘಟನೆಗಳು ಉದ್ದೇಶಿಸಿವೆ. ಬೆಳ್ಳಗ್ಗೆ 11:00ಕ್ಕೆ ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಶುರುವಾಗಲಿದ್ದು 12:00 ರ ಸುಮಾರಿಗೆ ಸಮಾವೇಶ ಸ್ಥಳವನ್ನು ತಲುಪಲಿದೆ.
ಹಿಂದೆ ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಜಾರಿಗೆ ಬಂದಿದ್ದ 44 ಕಾರ್ಮಿಕ ಕಾಯ್ದೆಗಳನ್ನು ಕಿತ್ತುಹಾಕಿ ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಹಿಂದೆ ಇದ್ದ ಸರ್ಕಾರ ಜಾರಿಗೆ ತಂದ ಕಾಯ್ದೆಗಳನ್ನು ಕಿತ್ತುಹಾಕಿ 4 ಕಾಯ್ದೆಗಳನ್ನು ಜಾರಿಗೆ ತಂದಿದೆ. ಸದ್ಯ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಈ 4 ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರಿಗಿದ್ದ ಸಾಂವಿಧಾನಿಕ ಹಕ್ಕುಗಳನ್ನೆಲ್ಲಾ ಕಸಿದುಕೊಳ್ಳುವ, ಕಾರ್ಮಿಕರ ನೌಕರಿ ಖಾಯಂ ಬಗ್ಗೆ ಪ್ರಶ್ನಿಸುವುದು ಪ್ರಗತಿ ವಿರೋಧಿಯೆಂದು, ಉದ್ಯೋಗಿ-ಉದ್ಯೋಗದಾತ-ಸರ್ಕಾರದ ನಡುವೆ ಇರುವ ತ್ರಿಪಕ್ಷೀಯ ಸಂಬಂಧವನ್ನು ದ್ವಿಪಕ್ಷೀಯವಾಗಿಸುವುದು ಮತ್ತು ದೇಶದ 50 ಕೋಟಿ ಕಾರ್ಮಿಕರು ಅದರಲ್ಲೂ, ಅಸಂಘಟಿತ ವಲಯದ ಕಾರ್ಮಿಕರ ಆದಾಯಕ್ಕೆ ಇದ್ದಂತಹ ಕನಿಷ್ಠ ಕಾನೂನು ಸಂರಕ್ಷಣೆಯನ್ನು ತೆಗೆದುಹಾಕುವ ದುರುದ್ದೇಶ. ಈ ಕಾರ್ಮಿಕ ಸಂಹಿತೆಗಳ ಹಿಂದೆ ಅಡಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದ್ದರಿಂದ, ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆಗಳನ್ನು ಹಿಂಪಡೆದಂತೆ ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೇಶವ್ಯಾಪಿ ಅಂದೋಲನವನ್ನು ನಡೆಸಲು ʻಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿʼ(MASA- Mazdoor Adhikar Sangharsha Abhiyan) ನಿರ್ಧರಿಸಿದೆ.
ಅದರ ಭಾಗವಾಗಿ ಭಾನುವಾರ ಡಿ.19 ರಂದು ನಗರದ ಫ್ರೀಡಂ ಪಾರ್ಕಿನಲ್ಲಿ ಕಾರ್ಮಿಕ ಸಂಘಟನೆಗಳ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶ ಸಭೆಯಲ್ಲಿ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆದ ರೀತಿಯಲ್ಲಿ ಕಾರ್ಪೋರೇಟ್ ಪರವಾಗಿರುವ ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ರೀತಿಯಲ್ಲೇ ಕಾರ್ಮಿಕರಿಗೆ 25,000 ಮಾಸಿಕ ವೇತನ ಕಡ್ಡಾಯ ಮಾಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಕಾಯಂ ಕೆಲಸವಿದ್ದ ಕಡೆ ಗುತ್ತಿಗೆ ಪದ್ದತಿ ರದ್ದು ಮಾಡಬೇಕು, ಸಾರ್ವಜನಿಕ ಉದ್ದಿಮೆಗಳನ್ನು ಬಂದ್ ಮಾಡಿ, ಉದ್ಯೋಗ ನೀಡುವ ಉದ್ದಿಮೆಗಳನ್ನು ಹೆಚ್ಚು ಮಾಡಬೇಕು ಎಂದು ಸಂಘಟನೆಗಳ ವತಿಯಿಂದ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಸಂಘಟನೆ ನಿರ್ಧರಿಸಿದೆ.
ಬಳ್ಳಾರಿ ಜಿಲ್ಲೆಯ ಗಣಿ ಕಾರ್ಮಿಕರಿಗೆ ಆರ್&ಆರ್ ಅಡಿಯಲ್ಲಿ ಪರಿಹಾರ ನೀಡಬೇಕು. ಯರಮರಸ ಥರ್ಮಲ್ ಪವರ್ ಪ್ಲಾಂಟ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಎಸ್ಆರ್ ದರದಲ್ಲಿ ವೇತನ ಹಾಗೂ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕು. BWSSB, BBMP ಹಾಗೂ ರೇಸ್ಕೋರ್ಸ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಮಾನ ವೇತನ, ಗ್ರಾಚ್ಯುಟಿ, ಆರೋಗ್ಯ ವಿಮೆ ಮತ್ತು ಕೆಲಸದ ಭದ್ರತೆಯನ್ನು ನೀಡಬೇಕು. ಅನ್ನಭಾಗ್ಯ ಯೋಜನೆ ಕಾರ್ಮಿಕರಿಗೆ ಗ್ರಾಚ್ಯುಟಿ ಹಾಗೂ ಆಹಾರ ಇಲಾಖೆಯಿಂದಲೇ ನೇರವಾಗಿ ಸಂಬಳ ಪಾವತಿ ಮಾಡುವುದು. ಎಲ್ಲಾ ಹಮಾಲಿ (Loading-Unloading) ಕಾರ್ಮಿಕರಿಗೆ ಮಹಾರಾಷ್ಟ್ರ ಮಾದರಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು. ಪ್ರತಿ ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು. ನೇಕಾರ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂಬ ಬೇಡಿಕೆಗಳು ಸಮಾವೇಶದ ಹಿಂದಿವೆ.
ಈ ಸಮಾವೇಶದಲ್ಲಿ TUCI, KSS, BWSSB-BBMP ಗುತ್ತಿಗೆ ಪೌರ ಕಾರ್ಮಿಕರ ಸಂಘ, ಬೆಂಗಳೂರು ರೇಸ್ ಕೋರ್ಸ್ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಲೋಡಿಂಗ್ & ಅನ್ಲೋಡಿಂಗ್ ಕಾರ್ಮಿಕರ ಒಕ್ಕೂಟ, MWSN, ಮಂಡ್ಯ ರೈಲ್ವೆ ಗೂಡ್ಸ್ ಶೆಡ್ ಕಾರ್ಮಿಕರ ಸಂಘ, KSBCL ಲೋಡಿಂಗ್ ಕಾರ್ಮಿಕರ ಸಂಘ, ಕೂಲಿ ನೇಕಾರ ಕಾರ್ಮಿಕರ ಬಳಗ ಸಂಘಟನೆಗಳು ಸಮಾವೇಶದಲ್ಲಿ ಪಾಲ್ಗೊಳಲಿವೆ.








