~ಡಾ. ಜೆ ಎಸ್ ಪಾಟೀಲ.
ಸ್ವಾಮಿ ವಿವೇಕಾನಂದರನ್ನು ಜೀವಂತ ಇರುವಾಗ ಸಾಕಷ್ಟು ಕಾಡಿದ್ದ ಮನುವಾದಿಗಳು ಅವರ ಅನುಪಸ್ಥಿತಿಯಲ್ಲೂ ಅವರ ಮೇಲಿನ ದ್ವೇಷವನ್ನು ಆಗಾಗ ಪ್ರದರ್ಶಿಸುತ್ತಾರೆ. ಅದೆ ವಿವೇಕಾನಂದರನ್ನು ಹಿಂದುತ್ವದ ಐಕಾನ್ ಮಾಡಿಕೊಂಡು ಮತ ಬೇಟೆಯಾಡುವ ಮನುವಾದಿಗಳು ಒಳಗೆ ಅವರ ಬಗ್ಗೆ ಹೊಂದಿರುವ ಮತ್ಸರವನ್ನು ಮುಚ್ಚಿಡಲು ಸಾಧ್ಯವಾಗುತ್ತಿಲ್ಲ. ಸ್ವಾಮಿ ವಿವೇಕಾನಂದರ ಕುರಿತು ಅನುಚಿತ ಹಾಗು ಅವಹೇಳನಕಾರಿ ಹೇಳಿಕೆ ನೀಡಿದ್ದ ಇಸ್ಕಾನ್ ಸಂಸ್ಥೆಯ ಸನ್ಯಾಸಿಯೊಬ್ಬನನ್ನು ಆ ಸಂಸ್ಥೆ ಒಂದು ತಿಂಗಳ ಕಾಲ ನಿಷೇಧಿಸುವ ನಾಟಕವಾಡಿದೆ.
ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಬಗ್ಗೆ ಅನುಚಿತವಾದ ಹಾಗು ಅವಹೇಳನಕಾರಿಯಾಗಿ ತಮ್ಮ ಪ್ರವಚನದಲ್ಲಿ ಮಾತನಾಡಿದ್ದ ಸನ್ಯಾಸಿ ಅಮೋಘ್ ಲೀಲಾ ದಾಸ್ ನನ್ನು ಇಸ್ಕಾನ್ ತಾತ್ಕಾಲಿಕವಾಗಿ ನಿಷೇಧಿಸಿದೆ.
ಈ ಅಮೋಘ ಲೀಲಾ ದಾಸ್ ತನ್ನ ಅಮೋಘ ಪ್ರವಚನದಲ್ಲಿ ವಿವೇಕಾಂದರು ಹಾಗು ಅವರ ಗುರು ರಾಮಕೃಷ್ಣ ಪರಮಹಂಸರು ಮೀನು ಸೇವಿಸುತ್ತಿದ್ದುದ್ದನ್ನು ಪ್ರಶ್ನಿಸಿದ್ದ. ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಮಂಗಳವಾರ ತಮ್ಮ ಸಂಸ್ಥೆಗೆ ಸೇರಿರುವ ಸನ್ಯಾಸಿಗಳಲ್ಲೊಬ್ಬರಾದ ಅಮೋಘ ಲೀಲಾ ದಾಸ್ ನನ್ನು ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಬಗ್ಗೆ ಅನುಚಿತ ಹಾಗು ಅವಮಾನಕರವಾಗಿ ಮಾತನಾಡಿದ್ದಕ್ಕಾಗಿ ನಿಷೇಧಿಸುವ ಹೇಳಿಕೆಯನ್ನು ನೀಡಿ ಕೈತೊಳೆದುಕೊಂಡಿದೆ. ಅಮೋಘ್ ಲೀಲಾ ದಾಸ್ ಆಧ್ಯಾತ್ಮಿಕ ಪ್ರೇರಕ ಭಾಷಣಕಾರನೆಂದು ಹೇಳಲಾಗುತ್ತಿದ್ದು, ಆ ಕುರಿತ ಆತನ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯವಾಗಿವೆ ಎನ್ನಲಾಗುತ್ತದೆ.
ಅಮೋಘ ಲೀಲಾ ದಾಸ್ ತನ್ನ ಪ್ರವಚನವೊಂದರಲ್ಲಿ ಸ್ವಾಮಿ ವಿವೇಕಾನಂದರು ಮೀನು ಸೇವಿಸುತ್ತಿದ್ದದ್ದು ಪ್ರಶ್ನಿಸಿದ್ದ. ಸದ್ಗುಣವಂತರು ಎಂದಿಗೂ ಯಾವ ಪ್ರಾಣಿಗಳನ್ನು ಕೂಡ ಘಾಸಿಗೊಳಿಸಿ ಅವುಗಳ ಮಾಂಸವನ್ನು ಸೇವಿಸುವುದಿಲ್ಲ ಎಂದು ಅಸಂಬದ್ಧವಾಗಿ ಮಾತನಾಡಿದ್ದ. “ಸದ್ಗುಣಿಯಾದವನು ಎಂದಾದರೂ ಮೀನು ತಿನ್ನುತ್ತಾನಾ? ಮೀನಿಗೂ ನೋವಾಗುತ್ತದೆ, ಅಲ್ಲವೇ? ಎಂದು ಈ ಅಮೋಘ ಲೀಲಾ ದಾಸ್ ತನ್ನ ಪ್ರವಚನದಲ್ಲಿ ಜನರನ್ನು ಉದ್ದೇಶಿಸಿ ಎಡಬಿಡಂಗಿಯಂತೆ ಒದರಿದ್ದನಂತೆ. ಅದೇ ರೀತಿಯಲ್ಲಿ ಆತ ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರನ್ನು ಸಹ ತರಾಟೆಗೆ ತೆಗೆದುಕೊಂಡಿದ್ದನಂತೆ. ಈತನ ಈ ಅಸಂಬದ್ಧ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಹುಟ್ಟುಹಾಕಿದ್ದವು.
ಸಾರ್ವಜನಿಕರು ಜಾಲತಾಣಗಳಲ್ಲಿ ಇಸ್ಕಾನ್ ಈ ಸನ್ಯಾಸಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರಂತೆ. ಅದಕ್ಕೆ ಮಣಿದ ಇಸ್ಕಾನ್, ಅಮೋಘ್ ಲೀಲಾ ದಾಸ್ ಅವರ ಅನುಚಿತ ಮತ್ತು ಸ್ವೀಕಾರಾರ್ಹವಲ್ಲದ ಮಾತುಗಳಿವು. ಈ ಇಬ್ಬರು ವ್ಯಕ್ತಿಗಳ ಶ್ರೇಷ್ಠ ಬೋಧನೆಗಳ ಬಗ್ಗೆ ಅಮೋಘ ಲೀಲಾ ದಾಸ ಅವರು ತಿಳುವಳಿಕೆಯ ಕೊರತೆಯಿಂದ ಮಾತನಾಡಿದ್ದಾರೆ. ಇದರಿಂದ ನಮ್ಮ ಸಂಸ್ಥೆಗೆ ನೋವಾಗಿದ್ದು ˌ ಅದಕ್ಕಾಗಿ ಅವರನ್ನು ಇಸ್ಕಾನ್‌ನಿಂದ ಒಂದು ತಿಂಗಳ ಅವಧಿಗೆ ನಿಷೇಧಿಸಲಾಗುವುದು ಎಂದು ಹೇಳಿಕೆ ನೀಡಿದೆ. ಇದರ ನಡುವೆ ಈ ಅಮೋಘ ಲೀಲಾ ದಾಸ್ ತಮ್ಮ ಈ ಅಸಂಬದ್ಧ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಿದ್ದು ಗೋವರ್ಧನ ಬೆಟ್ಟಗಳಲ್ಲಿ ಅದಕ್ಕಾಗಿ ಒಂದು ತಿಂಗಳ ಕಾಲ ಪ್ರಾಯಶ್ಚಿತ್ ಮಾಡಿಕೊಳ್ಳುವುದಾಗಿ ಹೇಳಿರುವ ಕುರಿತು ಇಸ್ಕಾನ್ ಉಲ್ಲೇಖಿಸಿದೆ.
ಈ ಅಮೋಘ ಲೀಲಾ ದಾಸ್ ತಕ್ಷಣವೇ ಜಾರಿಗೆ ಬರುವಂತೆ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ಹೊರಗುಳಿಯಬೇಕು ಎಂದು ಕೂಡ ಇಸ್ಕಾನ್ ಕಟ್ಟಪ್ಪಣೆ ಹೊರಡಿಸುವ ನಾಟಕ ಮಾಡಿದಂತಿದೆ. ಮೇಲ್ನೋಟಕ್ಕೆ ಇದೊಂದು ಅಚಾತುರ್ಯದ ಹೇಳಿಕೆಯಂತೆ ಕಂಡರೂ ಕೂಡ ಆಳದಲ್ಲಿ ಮನುವಾದಿಗಳಿಗೆ ವಿವೇಕಾನಂದರ ಬಗೆಗಿರುವ ಅಪಾರವಾದ ದ್ವೇಷವನ್ನು ಇದು ಬಹಿರಂಗಪಡಿಸಿದೆ. ವಿವೇಕಾನಂದರು ಚಿಕ್ಯಾಗೊ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವಾಗಲೂ ಅವರಿಗೆ ಪ್ರಾಯೋಕತ್ವದ ಪತ್ರ ಸಿಗದಂತೆ ನೋಡಿಕೊಂಡಿದ್ದು ಹಾಗು ಅವರು ಅಲ್ಲಿ ಜನಪ್ರೀಯ ಭಾಷಣ ಮಾಡಿ ವಾಪಸ್ಸು ಭಾರತಕ್ಕೆ ಬಂದಾಗ ಅವರನ್ನು ಸ್ವಾಗತಿಸಲು ನಿರಾಕರಿಸಿದ್ದ ಮನುವಾದಿಗಳ ನಡೆಯನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.
~ಡಾ. ಜೆ ಎಸ್ ಪಾಟೀಲ.