ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ನಾವು ಮಣ್ಣ ನ್ನು ದೇವರೆಂದೇ ಭಾವಿಸುತ್ತೇವೆ. ಕೃಷಿಕರಿಗೆ ಹೊಲದಲ್ಲಿ ಸಾಥ್ ನೀಡುವ ಎತ್ತುಗಳಿಗೂ ದೇವರ ಸ್ಥಾನವನ್ನೇ ನೀಡುತ್ತಾರೆ ನಮ್ಮ ಕೃಷಿಕರು. ಬಹುಶ: ಇದಕ್ಕೆ ಮಣ್ಣೆತ್ತಿನ ಅಮಾವಾಸ್ಯೆಯನ್ನು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ರೈತರ ಮೊದಲ ಕೃಷಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮವಾಸೆ ಹಬ್ಬದಾಚರಣೆ ಜು. 9, 10ರಂದು ನಡೆಯಲಿದ್ದು. ಕೊರನಾ ಅನ್ ಲಾಕ್ ನಲ್ಲಿ ಮನೆಯಲ್ಲೇ ಇದ್ದುಕೊಂಡು ಆಚರಣೆ ಮಾಡಲ್ಪಡುವ ಕೃಷಿಕರ ಹಬ್ಬದ ಸಿದ್ಧತೆ ಭರದಿಂದ ನಡೆದಿದೆ.

ಮಣ್ಣಿನಿಂದ ಮಾಡಿದ ಎತ್ತುಗಳ ಜೋಡಿಗೆ ಪೂಜೆ ಮಾಡುವುದು ಈ ಹಬ್ಬದ ವಿಶೇಷವಾಗಿದೆ. ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡುವುದರ ಮೂಲಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ರೈತರ ಪಾಲಿಗೆ ಮಣ್ಣೆತ್ತಿನ ಅಮಾವಾಸೆ ಎಂದರೆ ಎಲ್ಲಿಲ್ಲದ ಹಿಗ್ಗು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಾರೆ.

ಊರಿನ ಸಮೀಪ ಇರುವ ಕೆರೆಗಳಿಂದ 2 ತಿಂಗಳು ಮುಂಚಿತವಾಗಿ ಜೇಡಿ ಮಣ್ಣನ್ನು ತಂದು ಅದನ್ನು ಹದಗೊಳಿಸುತ್ತಾರೆ. ಹಬ್ಬದ 5 ದಿನಗಳ ಮುಂಚಿತವಾಗಿ ಬಸವಣ್ಣನ ಮೂರ್ತಿಗಳನ್ನು ತಯಾರು ಮಾಡುತ್ತಾರೆ, ನಂತರ ಹಬ್ಬದ ಎರಡು ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆಯ ವರೆಗೆ ಸಣ್ಣ ಬಸವಣ್ಣನಿಗೆ ರೂ.50 ಹಾಗೂ ದೊಡ್ಡ ಬಸವಣ್ಣನಿಗೆ ರೂ. 100 ರಂತೆ ಮಾರಾಟ ಮಾಡುತ್ತಾರೆ. ಕೆಲ ಮಣ್ಣಿನ ಬಸವಣ್ಣನಿಗೆ ಬಣ್ಣಹಚ್ಚಿ ಅಲಂಕಾರವೂ ಮಾಡಲಾಗಿರುತ್ತದೆ. ಆಧುನಿಕ ಭರಾಟೆಯಲ್ಲಿ ಸಂಸ್ಕೃತಿ, ಸಾಂಪ್ರದಾಯ ಪಾಲನೆ ಮಾಡುತ್ತಿರುವ ಜನರ ಸಂಖ್ಯೆ ತುಂಬಾ ಕಡಿಮೆ ಆಗಿದೆ ಆದ್ದರಿಂದ ಲಾಭವೂ ಕಡಿಮೆ ಬರುತ್ತದೆ ಆದರೂ ತಲೆ ತಲಾಂತರದಿಂದ ಮಾಡಿಕೊಂಡು ಬರುತ್ತಿರವ ಈ ವೃತ್ತಿಯನ್ನು ಬಿಡಲು ಮನಸ್ಸು ಒಪ್ಪುವುದಿಲ್ಲ ಹಾಗಾಗಿ ಪ್ರತಿ ವರ್ಷ ತಪ್ಪದೇ ಮಣ್ಣಿ ಬಸವಣ್ಣನ್ನು ಕುಟುಂಬಸ್ಥರೆಲ್ಲರೂ ಸೇರಿ ತಯಾರು ಮಾಡುತ್ತೇವೆ. ಈ ವರ್ಷ ಒಂದು ಸಾವಿರ ಮೂರ್ತಿಗಳನ್ನು ಸಿದ್ದಪಡಿಸಿದ್ದೇವೆ. ಈಗಾಗಲೇ 300 ಮೂರ್ತಿಗಳನ್ನು ವಿವಿಧ ಹಳ್ಳಿಯ ಜನರು ತೆಗೆದುಕೊಂಡು ಹೋಗಿದ್ದಾರೆ ಎಂದು ಚನ್ನು ಕುಂಬಾರ, ಬಸವರಾಜ ಕುಂಬಾರ ತಿಳಿಸಿದರು.

ಮುಂಗಾರಿನಲ್ಲಿ ಬರುವ ಈ ಹಬ್ಬದ್ದಲ್ಲಿ ರೈತರು ಮಳೆ ಬೆಳೆಯು ಉತ್ತಮವಾಗಿ ಆಗಲಿ ಬೆಳೆ ಬರಲಿ ಎಂದು ಪ್ರಾರ್ಥಿಸಿಸುತ್ತಾರೆ, ಭೂಮಿಯ ಎಲ್ಲೆಡೆ ರೈತನ ಜೊತೆಗೆ ವಾಸಿಸುವ ಬಸವಣ್ಣ ರೈತನಿಗೆ ಶಕ್ತಿ ನೀಡಲಿ, ಉತ್ತಮವಾಗಿ ಕೃಷಿ ಕೆಲಸಗಳನ್ನು ಮಾಡಲಿ ಮತ್ತು ಸಂಪತ್ತನ್ನು ರಕ್ಷಿಸಲಿ ಎಂದು ಬೇಡಿಕೊಳ್ಳುತ್ತಾರೆ ಎಂದು ರೈತರಾದ ಶರಣಪ್ಪ ಧರ್ಮಾಯತ, ಆನಂದ ಕೊಟಗಿ, ಚಂದ್ರು ಹೊನವಾಡ ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ರೂಢಿಯಲ್ಲಿರುವ ಈ ಹಬ್ಬದ್ದಲ್ಲಿ ರೈತರು ವಿಶೇಷವಾಗಿ ಬಸವಣ್ಣನಿಗೆ ಪೂಜೆ ಮಾಡ್ತಾರೆ. ಮಣ್ಣಿನಿಂದ ತಯಾರಿಸಲ್ಪಟ್ಟ ಚಿಕ್ಕ ಮೂರ್ತಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಪದ್ಧತಿಯಂತೆ ಮನೆಯಲ್ಲಿ ಪೂಜೆ ಮಾಡುತ್ತಾರೆ. ನಂತರ ಅದಕ್ಕೆ ಮಳೆ, ಬೆಳೆ, ಆಯಸ್ಸು, ಸಂಪತ್ತು, ಸುಖ-ಸಂತೋಷಕ್ಕಾಗಿ ವಿಶೇಷವಾಗಿ ಪ್ರಾರ್ಥಿಸುತ್ತಾರೆ. ಕೆಲವರು ಉಪವಾಸ ಮಾಡಿದ್ರೆ ಮತ್ತೆ ಕೆಲವರು ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆ ನೀಡಿ ಸಂತೋಷಪಡ್ತಾರೆ. ಈ ಹಬ್ಬವು ಎತ್ತು, ರೈತ, ಸಂಬಂಧಿಕರ ಬಂಧುತ್ವ ಹಾಗೂ ಮಧುರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಜಕ್ಕಲಿ ಗ್ರಾಮದ ಸಂಗಮೇಶ್ ಕಡಗದ ತಿಳಿಸಿದರು.

ಕೋವಿಡ್ ಸಂಕಷ್ಟದ ಮಧ್ಯೆಯೂ ಮಣ್ಣಿನ ಮೂರ್ತಿಗಳನ್ನು ಮಾಡಿ ಮಾರಿ ಅಲ್ಪ ಲಾಭದಲ್ಲಿ ತೃಪ್ತಿಪಟ್ಟುಕೊಂಡ ಹಲವು ಕುಂಬಾರರಿಗೆ ಮುಂದಿನ ಹಬ್ಬಗಳಲ್ಲಿ ಚೆನ್ನಾಗಿ ವ್ಯಾಪಾರವಾಗಿ ಎಲ್ಲರೂ ಸುಖವಾಗಿರಲಿ ಎಂಬುದು ನಮ್ಮ ಸದಾಶಯ.